ಉದಯವಾಹಿನಿ, ಹೆಬ್ರಿ: ತಾಲ್ಲೂಕಿನ ಕೃಷಿಕರಿಗೆ ನೆರವಾಗುವಂತೆ ಚಾರ ಜವಾಹರ್ ನವೋದಯ ವಿದ್ಯಾಲಯದ ಬಳಿ ಸೀತಾನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ₹70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ಲೋಕಾರ್ಪಣೆಗೆ ಸಿದ್ಧವಾಗಿದೆ.
ಹೆಚ್ಚಿನ ಸಂಖ್ಯೆಯ ರೈತರು ಈ ಅಣೆಕಟ್ಟೆಯ ಪ್ರಯೋಜನ ಪಡೆಯಲಿದ್ದಾರೆ. ಅಂತರ್ಜಲ ವೃದ್ಧಿ, ಕೃಷಿಕರ ತೋಟಗಳಿಗೆ ನೀರಿನ ವ್ಯವಸ್ಥೆ, ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವಿಕೆ, ಕುಡಿಯುವ ನೀರಿನ ಪೂರೈಕೆಗೆ ಇದರಿಂದ ಉಪಯೋಗವಾಗಲಿದೆ.
ಹಳೆಯ ಶಿಥಿಲಗೊಂಡ ಸೇತುವೆಯನ್ನು ಒಡೆಯಲು ಸುಮಾರು ಎರಡು ತಿಂಗಳು ಶ್ರಮಿಸಲಾಗಿದೆ. ಕಾಮಗಾರಿ ಆರಂಭವಾದ ಒಂದೇ ವರ್ಷದಲ್ಲಿ ಅತ್ಯಂತ ಸುಸಜ್ಜಿತ, ವ್ಯವಸ್ಥಿತ ಕಾಮಗಾರಿ ನಡೆದಿದೆ.
ವಾಹನ ಸಂಚಾರಕ್ಕೆ ಮುಕ್ತ: ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣವಾಗುತ್ತಿರುವುದರಿಂದ ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸುವ ವಾಹನ ಸವಾರರು ಚಾರ ಬಸದಿ ರಸ್ತೆ ಸುತ್ತು ಬಳಸಿ ಹೋಗುತ್ತಿದ್ದರು. ಮಳೆಗಾಲದಲ್ಲಿ ಆಗಾಗ ರಸ್ತೆ ಸಮಸ್ಯೆ ಕಾಡುತ್ತಿತ್ತು.
ಅತಿ ಕಿರಿದಾದ ರಸ್ತೆ ಇರುವುದರಿಂದ ಬಹಳಷ್ಟು ಸಮಸ್ಯೆ ಒಂದು ವರ್ಷದಿಂದ ಉಂಟಾಗಿದೆ. ಸೇತುವೆ ಲೋಕಾರ್ಪಣೆಯ ನಂತರ ಬಹು ಹತ್ತಿರದಿಂದ ಉತ್ತಮ ರಸ್ತೆಯ ವ್ಯವಸ್ಥೆಯೊಂದಿಗೆ ಸವಾರರು ತಲುಪಬಹುದು. 800 ಹೆಕ್ಟೇರ್ ಪ್ರದೇಶಗಳಿಗೆ ಉಪಯೋಗ: ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಸುಮಾರು 800 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿಯಿಂದ ಉಪಯೋಗವಾಗಲಿದೆ. ಕೃಷಿ ತೋಟಗಳಿಗೆ, ಕುಡಿಯುವ ನೀರಿಗಾಗಿ, ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚುತ್ತದೆ. ಈ ಮೂಲಕ ಅಂತರ್ಜಲ ವೃದ್ಧಿಗೆ ಸಹಾಯಕವಾಗುತ್ತದೆ.
