ಉದಯವಾಹಿನಿ, ಹಿರಿಯೂರು: ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಜವನಗೊಂಡನಹಳ್ಳಿ ಹಾಗೂ ಕಸ್ತೂರಿ ರಂಗಪ್ಪನಹಳ್ಳಿ ಗ್ರಾಮಗಳು ಸರಣಿ ಅಪಘಾತಗಳಿಂದ ಕುಖ್ಯಾತಿ ಪಡೆದಿದ್ದು ಸ್ಥಳೀಯರು ಭಯಪಡುವ ವಾತಾವರಣ ನಿರ್ಮಾಣವಾಗಿದೆ.ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಸಾರ್ವಜನಿಕರ ಒತ್ತಾಯದ ಮೇರೆಗೆ ಹೆದ್ದಾರಿ ಪ್ರಾಧಿಕಾರವು ಈಚೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ಸ್ವಲ್ಪಮಟ್ಟಿಗೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.ಆದರೂ ಕಿರಿದಾದ ಸೇವಾ ರಸ್ತೆಯ ಕಾರಣಕ್ಕೆ ಪದೇಪದೇ ಉಂಟಾಗುವ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಹೆದ್ದಾರಿ ಪ್ರಾಧಿಕಾರ ಷಟ್ಪಥ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಪದೇ ಪದೇ ಅಪಘಾತ ಸಂಭವಿಸುತ್ತಿವೆ ಎನ್ನಲಾಗಿದೆ. ಆ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಶಾಸಕಿಯಾಗಿದ್ದ ಪೂರ್ಣಿಮಾ ಅವರ ಮೇಲೆ ಸಾರ್ವಜನಿಕರು ಒತ್ತಡ ತಂದಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಷಯ ಮನವರಿಕೆ ಮಾಡಿ ಮೇಲ್ಸೇತುವೆಗೆ ಶಾಸಕರು ಅನುಮೋದನೆ ಕೊಡಿಸಿದ್ದರು. ಮೂರ್ನಾಲ್ಕು ತಿಂಗಳಿಂದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಹಳೆಯ ರಸ್ತೆಯನ್ನೆಲ್ಲ ಕಿತ್ತು ಹಾಕಿ, ಸೇವಾ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸೇವಾ ರಸ್ತೆಯಲ್ಲಿ ಬೃಹತ್ ಗಾತ್ರದ ಒಂದು ವಾಹನ ಹೋಗಲು ಮಾತ್ರ ಸಾಧ್ಯವಿದ್ದು, ಪದೇ ಪದೇ ವಾಹನ ದಟ್ಟಣೆ ಉಂಟಾಗುತ್ತಿದೆ. ಇದಕ್ಕಿಂತ ದೊಡ್ಡ ತೊಂದರೆ ಎಂದರೆ ಎದುರುಗಡೆಯಿಂದ ವಾಹನ ಬಂದರೆ ಸೇವಾ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ವಾಹನಗಳನ್ನು ಹಿಂದಿಕ್ಕಲು ಹೋಗಿ ಎರಡು ತಿಂಗಳಲ್ಲಿ ಐದಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೈಕಾಲು ಮುರಿದುಕೊಂಡವರದ್ದು ಲೆಕ್ಕವೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ‘ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪವೇ ಬೃಹತ್ ಸಿದ್ಧ ಉಡುಪು ತಯಾರಿಕಾ ಘಟಕವಿದೆ. ಮೂರು ಪಾಳಿಯಲ್ಲಿ ಎರಡೂವರೆ ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕರೆತರುವ ಹತ್ತಿಪ್ಪತ್ತು ವಾಹನಗಳು ಎರಡು ಫರ್ಲಾಂಗ್ ದೂರ ಸೇವಾ ರಸ್ತೆಯಲ್ಲಿಯೇ ಬಂದು ಗೇಟ್‌ನಲ್ಲಿರುವ ಯೂ ಟರ್ನ್ ಮೂಲಕ ಬಲಭಾಗದ ರಸ್ತೆಗೆ ಹೋಗಬೇಕಿದೆ. ಇದು ಅತ್ಯಂತ ಅಪಾಯಕಾರಿ ತಿರುವಾಗಿದೆ’ ಎಂದು ಸ್ಥಳೀಯರಾದ ಪಿಟ್ಲಾಲಿ ರವಿ ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!