ಉದಯವಾಹಿನಿ, ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಯಿಂದ ಪ್ರಕರಣ ಹೊರ ಬಂದಿದ್ದು, ಸೆಲಬ್ರಿಟಿಗಳನ್ನು ಸಹ ಬಂಧಿಸಲಾಗಿದೆ ಎಂದು ವಿವರಿಸಿದರು.
ಈ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಸಮರ್ಪಕ ರೀತಿಯಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆ ವಿವರಗಳನ್ನು ನಾವು ಈಗಲೇ ಹೇಳಲು ಆಗುವುದಿಲ್ಲ ಎಂದರು.
ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಕರಣ ಹೊರ ಬಂದಿದೆ. ವ್ಯಕ್ತಿಯ ಕೊಲೆ ಮಾಡಿರುವುದು ಹೀನ, ಅತ್ಯಂತ ಹೇಯ ಕೃತ್ಯ. ರೇಣುಕಾಸ್ವಾಮಿ ಕುಟುಂಬಕ್ಕೆ ನಾವು ನ್ಯಾಯ ಒದಗಿಸಿಕೊಡಬೇಕು. ಆದ್ದರಿಂದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು.
ಇದು ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲಾ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸುತ್ತೇವೆ. ಈ ಪ್ರಕರಣದ ಗಂಭೀರತೆ ಅರಿತು ವಿಜಯನಗರ ಉಪವಿಭಾಗದ ಎಸಿಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
