ಉದಯವಾಹಿನಿ, ನಾಗಮಂಗಲ: ‘ಬಿತ್ತನೆ ಬೀಜ, ರಸಗೊಬ್ಬರ, ಸರ್ಕಾರದ ಸಬ್ಸಿಡಿ, ರೈತರಿಗೆ ಮಾಹಿತಿ ನೀಡುವ ಜೊತೆಗೆ ಎಲ್ಲಾ ಸೌಲಭ್ಯ ಒಂದೇ ಕಡೆ ದೊರೆಯುವಂತೆ ಮಾಡಲು ರೈತ ಸಂಪರ್ಕ ಕೇಂದ್ರ ಸದೃಢಗೊಳಿಸಲು ಕ್ರಮವಹಿಸಲಾಗಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲ್ಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಬೆಳ್ಳೂರು ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ರೈತರ ಹಿತ ಸಂರಕ್ಷಣೆ ಸರ್ಕಾರದ ಮೊದಲ ಅದ್ಯತೆ. ರೈತರು ಸಮಗ್ರ ಬೇಸಾಯದ ಕುರಿತು ಹೆಚ್ಚಿನ ಗಮನ ನೀಡಬೇಕು. ಬೆಳೆ ವಿಮೆ ನೋಂದಣಿ ಮಾಡಿಸುವ ಮೂಲಕ ಅನಿರೀಕ್ಷಿತ ನಷ್ಟದಿಂದ ರಕ್ಷಣೆ ಪಡೆಯಬಹುದು’ ಎಂದರು.
‘ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿ 600 ಸಹಾಯಕ ಕೃಷಿ ಅಧಿಕಾರಿ ಮತ್ತು ಕೃಷಿ ಅಧಿಕಾರಿಗಳ ನೇಮಕಾತಿಗೆ ಸಂಬಂಧ ಕ್ರಮವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ‌ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಧಿಕಾರಿಗಳ ಮತ್ತು ಸಿಬ್ಬಂದಿ ನೇಮಕ ಮಾಡಿ ಸುಮಾರು 20 ವರ್ಷ ಜರುಗಿದ್ದು, ರೈತರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮವಹಿಸುತ್ತಿದೆ’ ಎಂದರು.
‘ರೈತರು ಮಳೆಯಾಗುವ ಪ್ರಮಾಣವನ್ನು ಆಧರಿಸಿ ಕಡಿಮೆ ಮತ್ತು ದೀರ್ಘಾವಧಿ ಬೆಳಗಳ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡು ನಿರ್ಧಾರ ಮಾಡಬೇಕು. ಕೃಷಿಯನ್ನು ಲಾಭದಾಯಕವಾಗಿ ಮಾಡುವ ಬಗ್ಗೆ ರೈತ ಸಂಪರ್ಕ ಕೇಂದ್ರಗಳು ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತವೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ಕೃಷಿ ಸಲಕರಣೆ ಪೂರೈಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!