ಉದಯವಾಹಿನಿ, ಬೆಂಗಳೂರು: ಹಾಡಹಗಲೇ ಹಾಸನ ನಗರದಲ್ಲಿ ಪಾತಕಿಗಳು ಇಬ್ಬರು ಯುವಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಹತ್ಯೆಯಾದ ಇಬ್ಬರು ಯುವಕರ ಗುರುತು ಸದ್ಯಕ್ಕೆ ಪತ್ತೆಯಾಗಿಲ್ಲ. ಇವರು ಸ್ಥಳೀಯರೇ ಅಥವಾ ಹೊರಗಿನವರೇ ಎಂಬುದನ್ನು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ.
ಹಾಸನ ನಗರದ ಹೊಯ್ಸಳ ನಗರ ಬಡಾವಣೆಯ ಬಳಿಯ ವಿಶ್ರಾಂತಿಗಾಗಿ ಅಳವಡಿಸಿರುವ ಬೆಂಚ್ಕಲ್ ಸಮೀಪವೇ ಪಾತಕಿಗಳು ಇಬ್ಬರು ಯುವಕರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದು, ಒಬ್ಬರ ಶವ ಕಾರಿನ ಒಳಗೆ, ಇನ್ನೊಬ್ಬರ ಶವ ಕಾರಿನ ಬಳಿ ಬಿದ್ದಿರುವುದು ಕಂಡುಬಂದಿದೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೇತಾ, ಬೆರಳಚ್ಚು ತಜ್ಞರು, ಎಫ್‌ಎಸ್‌ಎಲ್ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಮತ್ತೊಂದು ಮೂಲದ ಪ್ರಕಾರ, ಆಸ್ತಿ ವಿಚಾರವಾಗಿ ಆಗಾಗ್ಗೆ ಇವರಿಬ್ಬರೂ ಈ ಸ್ಥಳಕ್ಕೆ ಬಂದು ಜಗಳ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಸಹ ಇದೇ ಸ್ಥಳಕ್ಕೆ ಇವರಿಬ್ಬರೂ ಬಂದಿದ್ದು, ಜಗಳ ಉಂಟಾಗಿ ಒಬ್ಬರು ಇನ್ನೊಬ್ಬನನ್ನು ಗುಂಡಿಕ್ಕಿ ಕೊಂದು, ನಂತರ ತಾನೂ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
