ಉದಯವಾಹಿನಿ, ಕರಜಗಿ : ಪಟ್ಟಣದ ತಹಸೀಲ್ ಕಚೇರಿ ಸ್ಥಳಾಂತರಕ್ಕೆ ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿರೋಧಿಸಿ ಅಫಜಲಪುರ ತಾಲೂಕಿನ ರೈತ ಬಾಂಧವರು, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಜೂನ್ 24ರಂದು ಅಫಜಲಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಸತ್ಯಾಗ್ರಹ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಈರಣ್ಣ ಪಂಚಾಳ ತಿಳಿಸಿದ್ದಾರೆ.ಪಟ್ಟಣಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗಾಗಲೇ ತಾಲೂಕಿನ ರೈತರು, ಸಾರ್ವಜನಿಕರು, ಹೋರಾಟಗಾರರು, ಕೂಲಿ ಕಾರ್ಮಿಕರು ಸೇರಿಕೊಂಡು ಒಂದು ಹಂತದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರೂ ಸಹ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಹಾಗೂ ಪ್ರಯೋಜನವೂ ಆಗಿಲ್ಲ.
ಹೀಗಾಗಿ ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಿಸಬೇಕೆಂದು ದೃಢ ನಿರ್ಧಾರ ತೆಗೆದುಕೊಂಡು ಬೃಹತ್ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ.ರೈತ ಬಾಂಧವರು, ಅಂಗವಿಕಲರು, ವಯೋವೃದ್ಧರು ತಮ್ಮ ಕೆಲಸ ಕಾರ್ಯಗಳಿಗಾಗಿ 4 ಕಿಮೀ. ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗುವುದಕ್ಕಿಂತ ಮುಂಚೆ ನಾವೆಲ್ಲರೂ ಜಾಗೃತರಾಗಿ ಸರಕಾರಕ್ಕೆ ನಮ್ಮ ನೋವನ್ನು ಕೇಳಿಸಬೇಕು.ತಹಸೀಲ್ ಕಚೇರಿಯ ಸ್ಥಳಾಂತರಿಸಲು ನಿರ್ಧರಿಸಿ ಈಗಾಗಲೇ ಕಲಬುರಗಿ ಮುಖ್ಯ ರಸ್ತೆ ಬಳಿ ಇರುವ ಭೀಮಾ ಏತ ನೀರಾವರಿ ಕಚೇರಿಯ ನಿವೇಶನದಲ್ಲಿ ನೂತನ ತಹಸೀಲ್ ನಿರ್ಮಾಣಕ್ಕೆ ಕಚೇರಿ ಕಟ್ಟಡ ಪ್ರಾರಂಭ ಮಾಡಿದ್ದಾರೆ.ಸಾರ್ವಜನಿಕರ ಅಭಿಪ್ರಾಯವೂ ತೆಗೆದುಕೊಳ್ಳದೆ ಕಟ್ಟಡ ಪ್ರಾರಂಭಿಸಿದ್ದು ಸರಿಯಲ್ಲ.ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ತಹಸೀಲ್ ಕಾರ್ಯಾಲಯ 3 ಎಕರೆ 20 ಗುಂಟೆ ಜಮೀನು ಹೊಂದಿದ್ದು,ಇಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಭವ್ಯವಾದ ತಹಸೀಲ್ ಕಚೇರಿ ನಿರ್ಮಾಣ ಮಾಡಬಹುದು.
