ಉದಯವಾಹಿನಿ, ಬಳ್ಳಾರಿ: ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಡೆದ ಹಲವು ಗೊಂದಲಗಳ ಮಧ್ಯೆ. ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದ 18 ವಾರ್ಡಿನ ಸದಸ್ಯ ಮುಲ್ಲಂಗಿ ನಂದೀಶ್ ನೂತನ ಮೇಯರ್ ಆಗಿ ಮತ್ತು 26 ನೇ ವಾರ್ಡಿನ ಡಿ.ಸುಕುಂ ಅವರು ಉಪ ಮೇಯರ್ ಆಗಿ ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಚುನಾವಣೆ ನಡೆಸಿ ಆಯ್ಕೆ ಬಗ್ಗೆ ಘೋಷಣೆ ಮಾಡಿದರು.
ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ನಂದೀಶ್ ಅವರಿಗೆ 30 ಮತಗಳು ಬಂದರೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶ್ರೀನಿವಾಸ್ ಮೋತ್ಕರ್ ಅವರಿಗೆ 14 ಮತಗಳು ಬಂದವು.
ಅದೇ ರೀತಿ ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಿ.ಸುಕುಂ ಅವರು 30 ಮತ ಪಡೆದರೆ, ಬಿಜೆಪಿಯ ಚೇತನ ಅವರು 14 ಮತ ಪಡೆದರು.
ಮತದಾನದಲ್ಲಿ ಪಾಲಿಕೆ ಸದಸ್ಯರು, ರಾಜ್ಯ ಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ಲೋಕಸಭಾ ಸದಸ್ಯ ಇ.ತುಕರಾಂ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ನಗರ ಶಾಸಕ ಭರತ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರುಗಳು ಪಾಲ್ಗೊಂಡಿದ್ದರು.
ಗಟ್ಟಿ ನಾಯಕತ್ವದ ಕೊರತೆಯಿಂದ ಮೇಯರ್ ಸ್ಥಾನದ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಬೆಳಿಗ್ಗೆಯೇ ಆಯ್ಕೆ ಮಾಡಲು ಆಗದ ಕಾರಣ ಕಾಂಗ್ರೆಸ್ ನಿಂದಲೇ ನಾಲ್ವರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು.
ಆಕಾಂಕ್ಷಿಗಳಾದ ಮುಲ್ಲಂಗಿ ನಂದೀಶ್, ಎಂ ಪ್ರಭಂಜನ್ ಕುಮಾರ್, ಪಿ. ಗಾದೆಪ್ಪ, ಮತ್ತು ಪೇರಂ ವಿಕ್ಕಿ ಮೇಯರ್ ಸ್ಥಾನಕ್ಕೆ. ಒಬಿಸಿ ಮಹಿಳೆಗೆ ಮೀಸಲಿದ್ದ ಉಪಮೇಯರ್ ಸ್ಥಾನಕ್ಕೆ ಇದೇ ಪಕ್ಷದ 26 ನೇ ವಾರ್ಡಿನ ಸದಸ್ಯೆ ಡಿ.ಸುಕುಂ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ನಂತರ ಮತ್ತೆ ಅಲ್ಲಂ ಹೊಟೇಲ್ ನಲ್ಲಿ ಸಭೆ ಸೇರಿ ನಾಮಪತ್ರ ಸಲ್ಲಿಸಿದ್ದ ನಾಲ್ವರಿಂದ ನಾಮಪತ್ರ ಹಿಂಪಡೆಯುವ ಪತ್ರಕ್ಕೆ ಸಹಿಪಡೆದು. ನಂತರ ನಂದೀಶ್ ಅವರ ಹೆಸರನ್ನು ಅಂತಿಮಗೊಳಿಸಲಾಯ್ತು. ನಿನ್ನೆ ರಾತ್ರಿ ವರೆಗೆ ಅಲ್ಲಂ ಹೊಟೇಲ್ ನಲ್ಲಿ ನಡೆದ ವೀಕ್ಷಕರ ಸಂಧಾನ ಸಭೆಯಲ್ಲೂ ಮೇಯರ್ ಬಗ್ಗೆ ಒಮ್ಮತಮೂಡಲಿಲ್ಲವಂತೆ.
