ಉದಯವಾಹಿನಿ, ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ,ವಿನಯ್, ಪ್ರದೋಷ್, ಧನರಾಜ್ ಅವರ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು (ಜೂನ್ 22) ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಯ್ತು. ಮತ್ತೆ ಪೊಲೀಸರು ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಯ್ತು. ಇದೇ ಪ್ರಕರಣದ ಆರೋಪಿಗಳಾದ ಪವಿತ್ರಾ ಹಾಗೂ ಇತರರಿಗೆ ಎರಡು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಆ ದಿನದಿಂದಲೂ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೊದಲ ಬಾರಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು, ಒಂದು ದಿನ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ಕೇಳಲಾಯ್ತು, ಅದಾದ ಬಳಿಕ ಮತ್ತೆ ಎರಡು ದಿನಗಳ ಕಾಲ ಕಸ್ಟಡಿಗೆ ಕೇಳಿ ಪಡೆಯಲಾಗಿತ್ತು. ಅಲ್ಲಿಗೆ ಒಟ್ಟು 12 ದಿನಗಳ ಕಾಲ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾರೆ. ಈಗ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಿದ್ದು, ಇಂದೇ (ಜೂನ್ 22) ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತದೆ. ಜುಲೈ 4 ರ ವರೆಗೆ ದರ್ಶನ್ ಹಾಗೂ ಅವರ ಸಂಗಡಿಗರು ಜೈಲಿನಲ್ಲಿರಬೇಕಾಗಿದೆ.
ಪೊಲೀಸರು, ಆರೋಪಿಗಳಿಗೆ ನ್ಯಾಯಾಂಗ ಬಂಧನ ಕೋರಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು, ಅದನ್ನು ಪುರಸ್ಕರಿಸಿದ ನ್ಯಾಯಾಧೀಶ ಜಯಕುಮಾರ್ ಜಾಟ್ಲಾ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ವಿಚಾರಣೆಗೆ ಕರೆತರುವ ಮುನ್ನ ಪೊಲೀಸರು ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ನ್ಯಾಯಾಲಯಕ್ಕೆ ಬಂದ ಬಳಿಕವೂ ಸಹ ನ್ಯಾಯಾಧೀಶರು ಆರೋಪಿಗಳನ್ನು ಉದ್ದೇಶಿಸಿ, ಪೊಲೀಸರಿಂದ ಏನಾದರೂ ಸಮಸ್ಯೆ ಆಗಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಅಂತಿಮವಾಗಿ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು.
