ಉದಯವಾಹಿನಿ, ಚಿಕ್ಕಮಗಳೂರು: ನಗರದ ಮಾರುಕಟ್ಟೆಯಲ್ಲಿ ಹಲಸು ಮತ್ತು ಮಾವಿನ ಘಮಲಿನ ನಡುವೆ ಸದ್ಯ ನೇರಳೆ ಹಣ್ಣಿನ ಕಾರುಬಾರು ಶುರುವಾಗಿದೆ. ಬಣ್ಣದಿಂದಲೇ ಮನಸೆಳೆಯುವ ನೇರಳೆ ದರ ಕೊಂಚ ದುಬಾರಿಯಾದರೂ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ನಗರದ ಎಂ.ಜಿ. ರಸ್ತೆ, ಆಜಾದ್ ಪಾರ್ಕ್ ವೃತ್ತ, ಮಲ್ಲಂದೂರು ರಸ್ತೆ ಸೇರಿದಂತೆ ಪ್ರಮುಖ ಕಡೆ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದು, ಖರೀದಿ ಭರಾಟೆಯೂ ಜೋರಾಗಿದೆ.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿ ವಿವಿಧ ವರ್ಗದ ಗ್ರಾಹಕರು ಖರೀದಿಸಿ ಹಣ್ಣಿನ ರುಚಿ ಸವಿಯುತ್ತಿದ್ದಾರೆ.
‘ತಳ್ಳುಗಾಡಿಯ ವ್ಯಾಪಾರಿಗಳಲ್ಲಿ ನೇರಳೆ ಹಣ್ಣು ಕಾಲು ಕೆ.ಜಿಗೆ ₹60 ಹಾಗೂ ಪ್ರತಿ ಕೆ.ಜಿಗೆ ₹200 ರಿಂದ ₹220ರ ದರದಲ್ಲಿ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ನೇರಳೆ ಇಳುವರಿ ಪ್ರಮಾಣ ತುಂಬಾ ಕಡಿಮೆ. ಹಾಗಾಗಿ ಉತ್ತರ ಕರ್ನಾಟಕದ ಬೆಳಗಾವಿ, ಬಳ್ಳಾರಿ, ಬೆಂಗಳೂರಿನಿಂದ ತಂದು ವ್ಯಾಪಾರ ಮಾಡುತ್ತಿದ್ದೇವೆ’ ಎಂದು ನೇರಳೆ ಹಣ್ಣಿನ ವ್ಯಾಪಾರಿ ಅನ್ವರ್ ಹೇಳಿದರು.
ಮೇ ಮತ್ತು ಜೂನ್‌ನಲ್ಲಿ ಮಾತ್ರವೇ ಸಿಗುವ ನೇರಳೆ ಹಣ್ಣು ಬಲು ರುಚಿ. ಮಧುಮೇಹಿಗಳ ಆರೋಗ್ಯಕ್ಕೆ ಅನುಕೂಲವಿರುವ ಈ ಹಣ್ಣಿಗೆ ಮಾರುಕಟ್ಟೆಗಳಲ್ಲಿಯೂ ಬೇಡಿಕೆ ಇದೆ. ನಾಯಿ ನೇರಳೆ, ಜಂಬೂ ನೇರಳೆಯಂತಹ, ಸೀಡ್‌ಲೆಸ್ ತಳಿಗಳಿವೆ. ಗ್ರಾಹಕರು ಇದರ ಮಹತ್ವ ಅರಿತು ಬೆಲೆ ತುಸು ಹೆಚ್ಚಾದರೂ ಖರೀದಿಸುತ್ತಾರೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 3 ಹೆಕ್ಟೇರ್ ಪ್ರದೇಶದಲ್ಲಿ ನೇರಳೆ ಬೆಳೆ ಇದೆ. ಈ ಪೈಕಿ ಅಜ್ಜಂಪುರದ ಹೆಬ್ಬೂರು, ಹೆಗ್ಗಡೀಹಳ್ಳಿ ಹಾಗೂ ಕಡೂರು ಭಾಗದಲ್ಲಿ ಹೆಚ್ಚು. ಬಹುತೇಕ ರೈತರು ಸಾಂಪ್ರಾದಾಯಿಕ ಹಾಗೂ ಲಾಭದಾಯಕ ಬೆಳೆಗಳಾದ ತೆಂಗು, ಅಡಿಕೆಗೆ ಒಲವು ತೋರುತ್ತಿದ್ದಾರೆ.
