ಉದಯವಾಹಿನಿ, ಕೋಲಾರ: ಟೊಮ್ಯಾಟೊ ಬೆಳೆಯಲ್ಲಿ ಎಲೆ ಮುಟುರು ರೋಗದ ಸಮಗ್ರ ನಿರ್ವಹಣೆಗಾಗಿ ರೈತರು: ರೋಗ ಮುಕ್ತ ಆರೋಗ್ಯವಂತ ಸಸಿಗಳನ್ನು ನಾಟಿಗೆ ಬಳಸುವುದು. ರೈತರು ಕಡ್ಡಾಯವಾಗಿ ೪೦ ಮೆಶ್ ನೈಲಾನ್ ಪರದೆ ಬಳಕೆ ಮಾಡಿರುವ ನರ್ಸರಿಗಳಿಂದ ಸಸಿಗಳನ್ನು ಖರೀದಿಸಬೇಕು.
ಋತುಮಾನಕ್ಕೆ ಶಿಫಾರಸ್ಸು ಮಾಡಿದ ತಳಿಗಳನ್ನೆ ಬೆಳೆಯಬೇಕು. ಭೂಮಿ ಸಿದ್ದಗೊಳಿಸುವಾಗ ಎಕರೆಗೆ ೧೫ ಟನ್‌ನಷ್ಟು ಕೊಟ್ಟಿಗೆ ಗೊಬ್ಬರವನ್ನು, ೧೦೦ ಕೆ.ಜಿ. ಬೇವಿನ ಹಿಂಡಿ ಮತ್ತು ೫ ಕಿ.ಗ್ರಾಂ ಟ್ರೈಕೋಡರ್ಮಾ ಹಾಗೂ ೫ ಕಿ.ಗ್ರಾಂ ಸುಡೊಮೊನಸ್ ಜೈವಿಕ ರೋಗನಾಶಕಗಳಿಂದ ಪುಷ್ಠಿಕರಿಸಿ ಮಣ್ಣಿಗೆ ಸೇರಿಸುವುದು. ಅದೇ ರೀತಿ ನರ್ಸರಿಗಳಲ್ಲಿ ಸಸಿ ತಯಾರಿಸುವ ಮೊದಲು ಕೋಕೊಪಿಟ್‌ಗೆ ಬೇವಿನ ಹಿಂಡಿ, ಟ್ರೈಕೋಡರ್ಮಾ ಮತ್ತು ಸುಡೊಮೊನಸ್‌ಗಳಿಂದ ಪುಷ್ಠಿಕರಿಸಿ ಬಳಸಬೇಕು. ಮುಖ್ಯ ಬೆಳೆ ಕ್ಷೇತ್ರದಲ್ಲಿ ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ಬಿಳಿ ನೊಣಗಳನ್ನು ಹಿಮ್ಮೆಟ್ಟಿಸುವುದು.
ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡುವ ೩೦ ದಿನಗಳ ಮುಂಚಿತವಾಗಿ ತೋಟದ ಸುತ್ತಲೂ ಮೆಕ್ಕೆಜೋಳ ಅಥವಾ ಮೇವಿನ ಜೋಳವನ್ನು ತಡೆ ಬೆಳೆಯಾಗಿ ೪ ರಿಂದ ೫ ಸಾಲು ದಟ್ಟವಾಗಿ ಬೆಳೆಯುವುದು ಅಥವಾ ತೋಟದ ಸುತ್ತಲೂ ೪೦ ಮೆಶ್ ನೈಲಾನ್ ಪರದೆಯನ್ನು ಭೂಮಿಯಿಂದ ೫ ಅಡಿ ಎತ್ತರದವರೆಗೆ ಕಟ್ಟುವುದರಿಂದ ಬಿಳಿ ನೊಣಗಳ ಹರಡುವಿಕೆ ನಿಯಂತ್ರಣವಾಗಿ ಎಲೆ ಮುಟುರು ರೋಗದ ಪ್ರಮಾಣ ಕಡಿಮೆಯಾಗುತ್ತದೆ. ಬಿಳಿ ನೊಣದ ಇತರೆ ಆಶ್ರಯ ಸಸಿಗಳಾದ ಪಾರ್ಥೇನಿಯಮ್ ಕಡ್ಲೆಮುಳ್ಳು ಅಲ್ಪಭೇದಿಸೊಪ್ಪು, ಗಬ್ಬುಸೊಪ್ಪು/ ಮೂಗಿತಿ ಸೊಪ್ಪು, ಭೇದಿಸೊಪ್ಪು ಮುಂತಾದ ಕಳೆ ಗಿಡಗಳನ್ನು ಟೊಮ್ಯಾಟೊ ಬೆಳೆಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಿತ್ತು ನಾಶಪಡಿಸುವುದು. ಒಂದು ಬಾರಿ ಟೊಮ್ಯಾಟೊ ಬೆಳೆದ ನಂತರ ಪರ್ಯಾಯ ಬೆಳೆಗಳಾದ ಮೆಕ್ಕೆಜೋಳ, ರಾಗಿ ಮುಂತಾದವುಗಳನ್ನು ಬೆಳೆಯುವುದು. ಪ್ರತಿ ಎಕರೆಗೆ ೧೫ ರಿಂದ ೨೦ ಹಳದಿ ಅಂಟು ಬಲೆಗಳನ್ನು ಗಿಡದ ಎತ್ತರಕ್ಕಿಂತ ೧ ಆಡಿ ಮೇಲೆ ಜಿಗ್ಜಾಗ್ ಮಾದರಿಯಲ್ಲಿ ತೂಗು ಹಾಕುವುದು ಹಾಗೂ ಅವುಗಳನ್ನು ೧೫ ದಿನಗಳಿಗೊಮ್ಮೆ ಬದಲಾಯಿಸುವುದು.
ಗಿಡಗಳ ಸಧೃಡ ಬೆಳವಣಿಗೆಗಾಗಿ ಹಾಗೂ ನಂಜಾಣು ರೋಗ ನಿರೋಧಕ ಶಕ್ತಿ ಹೊಂದಲು ಸಾಗರಿಕಾ ೨ ಮಿ.ಲೀ ಒಂದು ಲೀಟರ್ ನೀರಿಗೆ ಬೆರೆಸಿ ನಾಟಿ ಮಾಡಿದ ೩೦, ೪೫ ಹಾಗೂ ೬೦ ದಿನಗಳಿಗೊಮ್ಮೆ ಮೂರು ಬಾರಿ ಸಿಂಪರಣೆ ಮಾಡಬೇಕು. ಆರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಣದಲ್ಲಿಡಬಹುದು.
