ಉದಯವಾಹಿನಿ,ಬೆಂಗಳೂರು: ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕುಗೊಂಡಿದೆ. ಇದರಿಂದ ಮೂರು ರಾಜ್ಯಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಜಲಾಶಯಗಳಿಗೆ ಅಧಿಕ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ.ಕೇರಳ ಮಳೆಯಿಂದ ಕಬಿನಿಗೆ 17 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಮಂಡ್ಯದ ಕೃಷ್ಣರಾಜಸಾಗರ ಜಲಾಶಯಕ್ಕೂ ನೀರಿನ ಪ್ರಮಾಣ ಹೆಚ್ಚಿದ್ದು 3856 ಕ್ಯುಸೆಕ್‌ಗೆ ಹೆಚ್ಚಳವಾಗಿದೆ. ಹಾರಂಗಿ, ಹೇಮಾವತಿ ಜಲಾಶಯದಲ್ಲೂ ನೀರು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಉತ್ತರ ಕರ್ನಾಟಕದ ಅತೀ ದೊಡ್ಡ ಜಲಾಶಯ ಆಲಮಟ್ಟಿಗೂ ನೀರು ಹರಿದು ಬರುತ್ತಿದೆ. ಸದ್ಯ 6 ಸಾವಿರಕ್ಕೂ ಅಧಿಕ ಒಳ ಹರಿವು ಇದೆ. ಮಲೆನಾಡು ಭಾಗದ ಜಲಾಶಯಗಳಾದ ತುಂಗ ಹಾಗೂ ಭದ್ರಾ ಕೂಡ ಜಲವೈಭವವನ್ನು ಕಾಣುತ್ತಿವೆ.

ಕರ್ನಾಟಕದ ಹತ್ತಕ್ಕೂ ಹೆಚ್ಚು ಪ್ರಮುಖ ಜಲಾಶಯಗಳಲ್ಲಿ ಮೈಸೂರು ಜಿಲ್ಲೆಯ ಕಬಿನಿ( Kabini Dam) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಅಧಿಕ. ಗುರುವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯಕ್ಕೆ 16977 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 115 ಕ್ಯುಸೆಕ್‌ ಒಳ ಹರಿವು ಮಾತ್ರ ಇತ್ತು. ಜಲಾಶಯದ ನೀರಿನ ಮಟ್ಟವೂ 2269.22 ಅಡಿಗೆ ತಲುಪಿದೆ. ಒಂದೇ ದಿನದಲ್ಲಿ ನಾಲ್ಕು ಅಡಿಯಷ್ಟು ನೀರು ಬಂದಿರುವುದು ವಿಶೇಷ. ಅದರಲ್ಲೂ ಕೇರಳದ ವಯನಾಡು ಭಾಗದಲ್ಲಿ( Kerala Rains) ಮೂರ್ನಾಲ್ಕು ದಿನದಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಬುಧವಾರವೂ ಮಳೆ ಪ್ರಮಾಣ ಅಧಿಕವಾಗಿತ್ತು. ಈ ಕಾರಣದಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಇದೇ ರೀತಿ ಒಂದು ವಾರ ಮಳೆಯಾದರೆ ಜಲಾಶಯದ ನೀರಿನ ಪ್ರಮಾಣ ತುಂಬುವ ಹಂತಕ್ಕೂ ಬರಬಹುದು. ಜಲಾಶಯದ ಗರಿಷ್ಠ ಮಟ್ಟ2284 ಅಡಿ. ಸದ್ಯ ಜಲಾಶಯದಲ್ಲಿ 11.30 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು. ಒಳ ಹರಿವಿನ ಪ್ರಮಾಣವನ್ನೂ ಒಂದು ಸಾವಿರ ಕ್ಯುಸೆಕ್‌ನಷ್ಟೇ ಮುಂದುವರೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!