ಉದಯವಾಹಿನಿ, ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಅವರ ಕನಸಿನಂತೆ ರಾಜ್ಯದಲ್ಲಿ ಚಿತ್ರನಗರಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ಶಿವಾನಂದ ಸರ್ಕಲ್ ಬಳಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಫಿಲಂ ಸಿಟಿ ಇದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಿತ್ರನಗರಿ ನಿರ್ಮಿಸಬೇಕೆಂಬುದು ಡಾ.ರಾಜ್‌ಕುಮಾರ್ ಅವರ ಕನಸು. ಬಹಳ ವರ್ಷಗಳಿಂದಲೂ ಇದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಈ ಹಿಂದೆ ನಮದೇ ಸರ್ಕಾರ ಮೈಸೂರಿನ ಕಡಕೋಳದ ಹಿಮಾವು ಬಳಿ 100 ಎಕರೆಯನ್ನು ಚಿತ್ರನಗರಿಗಾಗಿ ನೀಡಿದೆ. ಅಲ್ಲಿ ಖಾಸಗಿ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತವಾದ ಫಿಲಂಸಿಟಿ ನಿರ್ಮಿಸಲು ಅಗತ್ಯ ಇರುವ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಚಿತ್ರರಂಗದ ಬೆಳವಣಿಗೆಗೆ ಅಗತ್ಯ ಇರುವ ಎಲ್ಲಾ ಸಹಕಾರಗಳನ್ನು ನಮ ಸರ್ಕಾರ ನೀಡಲಿದೆ. ಸಂಕಷ್ಟದ ಸಂದರ್ಭದಲ್ಲೂ ನಿರ್ಮಾಪಕರು ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡಕ್ಕೆ ಈವರೆಗೂ ಸರ್ಕಾರದಿಂದ ಆರ್ಥಿಕ ಸಹಾಯ ಕೇಳಿರಲಿಲ್ಲ. ಈಗಷ್ಟೇ ಕೇಳಿದ್ದಾರೆ. ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು. ಚಿತ್ರರಂಗದ ಅಭಿವೃದ್ಧಿಗೆ ಮೊದಲಿನಿಂದಲೂ ಸರ್ಕಾರ ನೆರವು ನೀಡಲಾಗುತ್ತಿದೆ. ಮುಂದೆ ಕೂಡ ಅದೇ ರೀತಿಯ ಬೆಂಬಲ ಮುಂದುವರೆಯಲಿದೆ ಎಂದು ಹೇಳಿದರು.
ಅನ್ಯಭಾಷೆಗಳ ಮಾದರಿಯಲ್ಲಿ ಕನ್ನಡ ಭಾಷೆಯಲ್ಲೂ ಓಟಿಟಿ ವೇದಿಕೆ ಸೃಷ್ಟಿಸುವ ಬೇಡಿಕೆ ಕುರಿತು ಪರಿಶೀಲಿಸಲಾಗುವುದು. ಸಂಬಂಧಪಟ್ಟವರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.ಕನ್ನಡ ಭಾಷೆಯ ಚಿತ್ರಗಳಿಗೆ ನಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುವುದು. ರಾಜ್ಯದಲ್ಲಿ ಫಿಲಂಸಿಟಿ ಮಾಡಲೇಬೇಕಿದೆ. ರಾಜ್‌ಕುಮಾರ್ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಹೇಳಿದರು..
