ಉದಯವಾಹಿನಿ, ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಗರಣದ ಬಗ್ಗೆ ಎಸ್‌ಐಟಿ ಮತ್ತು ಸಿಬಿಐನಿಂದ ಪ್ರತ್ಯೇಕವಾದ ತನಿಖೆ ನಡೆಯುತ್ತಿದೆ.
ಸಿಬಿಐನವರು ಬ್ಯಾಂಕಿನಲ್ಲಾಗಿರುವ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿ ಇಲಾಖೆ ಲೋಪಗಳ ಬಗ್ಗೆ ವಿಚಾರಣೆ ನಡೆಸುತ್ತದೆ. ಈ ಎರಡೂ ತನಿಖೆಯ ವರದಿಗಳು ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಅದು ಅಧಿಕಾರಿಗಳೇ ಇರಲಿ, ರಾಜಕಾರಣಿಗಳೇ ಇರಲಿ, ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರದಿ ಬರುವವರೆಗೂ ಯಾರ ಪಾತ್ರದ ಬಗ್ಗೆಯೂ ಸ್ಪಷ್ಟತೆ ಇಲ್ಲ. ತನಿಖೆ ಪೂರ್ಣಗೊಳ್ಳುವವರೆಗೂ ತಾಳೆಯಿಂದ ಇರಿ ಎಂದು ಹೇಳಿದರು.
ಡಿಸಿಎಂ ಹುದ್ದೆಗಾಗಿ ನಮಲ್ಲಿ ಯಾವುದೇ ಕಿತ್ತಾಟಗಳಿಲ್ಲ. ಜನಾದೇಶ ನೀಡಿದಂತೆ ನಮ ಸರ್ಕಾರ ಅಭಿವೃದ್ಧಿ ಕೆಲಸದತ್ತ ಗಮನ ಹರಿಸಿದೆ. ಬಿಜೆಪಿಯವರು ಅನಗತ್ಯವಾಗಿ ನಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೀರಾವರಿ, ರಸ್ತೆ ಅಭಿವೃದ್ಧಿ, ಕಂದಾಯ ಇಲಾಖೆ ಸೇರಿದಂತೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಿಂತಿಲ್ಲ.
ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೂ ಕೂಡ ಮುಂದುವರೆಸಲಾಗಿದೆ ಎಂದು ತಿಳಿಸಿದರು. ಬಿಜೆಪಿ ನಾಯಕರುಗಳ ನಡುವೆ ಹೊಂದಾಣಿಕೆ ಇಲ್ಲ. ಪರಸ್ಪರ ಅವರೇ ಕಚ್ಚಾಡುತ್ತಿದ್ದಾರೆ. ನಮ ಬಗ್ಗೆ ಹೇಳಿಕೆ ನೀಡುವುದು ಹಾಸ್ಯಾಸ್ಪದ ಎಂದರು. ಇಂದಿನಿಂದ ನೂತನ ಅಪರಾಧ ಮತ್ತು ನ್ಯಾಯ ಕಾನೂನುಗಳು ದೇಶಾದ್ಯಂತ ಜಾರಿಯಾಗುತ್ತಿದೆ. ರಾಜ್ಯಸರ್ಕಾರ ಅವುಗಳ ಅನುಷ್ಠಾನಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದೆ.
