ಉದಯವಾಹಿನಿ, ಲಕ್ಷ್ಮೇಶ್ವರ: ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಮೂಲ ಸೌಲಭ್ಯಗಳಿಂದ ನರಳುತ್ತಿವೆ. ಈ ಗ್ರಾಮ ಪಂಚಾಯ್ತಿಗೆ ಮುನಿಯನ ತಾಂಡಾ, ಚಂದ್ರಪ್ಪನ ತಾಂಡಾ, ಉಂಡೇನಹಳ್ಳಿ, ಯಲ್ಲಾಪುರ, ಉಳ್ಳಟ್ಟಿ, ಶ್ಯಾಬಳ ಗ್ರಾಮಗಳು ಬರುತ್ತಿದ್ದು ಇಲ್ಲೆಲ್ಲ ಸುಸಜ್ಜಿತ ರಸ್ತೆ ಮತ್ತು ಚರಂಡಿಗಳ ಕೊರತೆ ಎದ್ದು ಕಾಣುತ್ತಿದೆ.
ಅಂದಾಜು ಆರು ಸಾವಿರ ಜನಸಖ್ಯೆಯ ಇರುವ ಗ್ರಾಮ ಪಂಚಾಯ್ತಿಯಲ್ಲಿ ಬರೋಬ್ಬರಿ 15 ಜನ ಸದಸ್ಯರು ಪಂಚಾಯ್ತಿಯನ್ನು ಪ್ರತಿನಿಧಿಸುತ್ತಾರೆ.
ಪಂಚಾಯ್ತಿ ವ್ಯಾಪ್ತಿಯ ಮುನಿಯನ ತಾಂಡಾದಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಆದರೆ ಗಲೀಜು ನೀರು ಹರಿದು ಹೋಗಲು ಚರಂಡಿಗಳೇ ಇಲ್ಲ. ಇದರಿಂದಾಗಿ ಹೊಲಸು ನೀರು ಮನೆಗಳ ಮುಂದೆ ಹರಿಯುತ್ತಿದ್ದು ಗಬ್ಬು ನಾರುವ ಪರಿಸ್ಥಿತಿ ತಲೆದೋರಿದೆ. ಆದಷ್ಟು ಬೇಗನೇ ಅಶುದ್ಧ ನೀರು ಹರಿದು ಹೋಗಲು ಚರಂಡಿ ನಿರ್ಮಿಸಬೇಕಾದ ಅಗತ್ಯ ಇದೆ.
‘ನಮ್ಮ ಮುನಿಯನ ತಾಂಡಾದಲ್ಲಿ ಗಟಾರ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ತಾಂಡಾದ ನಿವಾಸಿಗಳ ಸಹಕಾರ ತೆಗೆದುಕೊಂಡು ಆದಷ್ಟು ಬೇಗನೇ ಗಟಾರ ಕಟ್ಟಿಸಲಾಗುವುದು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಲಮಾಣಿ ಹೇಳಿದರು.
ಮುಖ್ಯವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ಯಾಬಳ ಗ್ರಾಮದಲ್ಲಿ ಮಳೆ ನೀರು ಮತ್ತು ಗ್ರಾಮಸ್ಥರು ಬಳಕೆ ಮಾಡಿದ ಗಲೀಜು ನೀರು ಎರಡ್ಮೂರು ಮನೆಗಳ ಎದುರು ನಿಲ್ಲುತ್ತಿದ್ದು ಇದು ಬಹಳ ದಿನಗಳ ಸಮಸ್ಯೆಯಾಗಿ ಉಳಿದುಕೊಂಡಿದೆ. ನಿಂತಲ್ಲಿಯೇ ನೀರು ನಿಲ್ಲುವುದರಿಂದ ಸೊಳ್ಳೆಗಳು ಹುಟ್ಟಲು ಈ ಭಾಗ ಕಾರಣವಾಗಿದೆ.
