ಉದಯವಾಹಿನಿ, ಮಂಡ್ಯ: ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ಮೇಯುತ್ತಿದ್ದ ಕುರಿ ಹಿಂಡಿನ ಮೇಲೆ ನಾಯಿಗಳು ದಾಳಿ ನಡೆಸಿ ಮೂರು ಕುರಿಗಳನ್ನು ತಿಂದು ಹಾಕಿರುವ ಘಟನೆ ನಡೆದಿದೆ.ರೈತ ಮಹಿಳೆ ಸೌಭಾಗ್ಯ ಶಿವಲಿಂಗಯ್ಯ ಎಂಬುವರಿಗೆ ಸೇರಿದ ಮೂರು ಕುರಿಗಳು ಶುಕ್ರವಾರ ಸಂಜೆ ನಾಯಿಗಳ ದಾಳಿಗೆ ಬಲಿಯಾದರೆ, ಎರಡು ಕುರಿಗಳು ಗಾಯಗೊಂಡಿವೆ.ಸೌಭಾಗ್ಯ ಅವರು ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ನಡೆಸಿವೆ.ಕುರಿ ಸಾಕಾಣೆ ಮಾಡಿಕೊಂಡು ಜೀವನ ನಡೆಸುತ್ತಿರುವ ನಮಗೆ ಆಗಾಗ್ಗೆ ನಾಯಿ ದಾಳಿಯಿಂದ ಸಾಕಿರುವ ಕುರಿಗಳನ್ನು ಕಳೆದುಕೊಳ್ಳುವಂತಾಗಿದೆ. ಕಳೆದ ಬಾರಿಯೂ ಇದೇ ರೀತಿಯ ದುರ್ಘಟನೆ ನಡೆದಿದ್ದು, ಆಗಲೂ ನಾವು ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಿ ಪರಿಹಾರಕ್ಕೆ ಮನವಿ ಮಾಡಿದ್ದೆವು. ಆದರೆ ಪರಿಹಾರ ನೀಡಲಿಲ್ಲ ಎಂದು ರೈತ ಮಹಿಳೆ ಆರೋಪಿಸುತ್ತಾರೆ.
ನಾಯಿ ಹಾವಳಿಯನ್ನು ನಿಯಂತ್ರಿಸಿ, ಅವುಗಳನ್ನು ಹಿಡಿದು ಬೇರೆಡೆಗೆ ಸಾಗಿಸಿ, ಇವುಗಳಿಂದ ನಮಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!