ಉದಯವಾಹಿನಿ, ಬೆಂಗಳೂರು: ಇನ್ನೊಂದು ವಾರದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ, ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಆಯ್ಕೆ ಮಾಡಬೇಕಿದ್ದು, ಆಕಾಂಕ್ಷಿಗಳ ಅಂತಿಮ ಹಂತದ ತೆರೆಮೆರೆಯ ಕಸರತ್ತು ಜೋರಾಗಿದೆ.
ವಿಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾಗಿರುವ ಹಿನ್ನಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಇಬ್ಬರ ಹೆಸರು ಕೇಳಿ ಬರುತ್ತಿತ್ತು. ಈಗ, ಈ ಪಟ್ಟಿಗೆ ಅಚ್ಚರಿಯಾಗಿ ಮತ್ತೋರ್ವ ಹಿರಿಯ ನಾಯಕನ ಹೆಸರು ಸೇರ್ಪಡೆಯಾಗಿದೆ.ವಿಧಾನಪರಿಷತ್‌ ವಿಪಕ್ಷ ನಾಯಕ ರೇಸ್‌‍ನಲ್ಲಿ ಸಿಟಿ ರವಿ, ಎನ್‌.ರವಿಕುಮಾರ್‌ ಸದನದಲ್ಲಿ ಹಿಂದುತ್ವ ಫೈರ್‌ ಬ್ಯಾಂಡ್‌ ಎದುರಿಸೋದು ಕೈಗೆ ಸವಾಲು!ಆದರೆ ಬಿಜೆಪಿ ವರಿಷ್ಠರು ವಿಪಕ್ಷದ ನಾಯಕನ ಆಯ್ಕೆ ಮಾಡುವ ಮುನ್ನವೇ, ಗೂಗಲ್‌ ತನ್ನ ಕರ್ನಾಟಕ ವಿಧಾನ ಪರಿಷತ್‌ ಪೇಜ್‌ ನಲ್ಲಿ ಛಲವಾದಿ ನಾರಾಯಣಸ್ವಾಮಿಯವರು ವಿಪಕ್ಷದ ನಾಯಕ ಎಂದು ಅಪ್ಡೇಟ್‌ ಮಾಡಿದೆ. ಅಲ್ಲದೇ, ಜೂನ್‌ 29, 2024ರಿಂದ ಅನ್ವಯವಾಗುವಂತೆ ವಿಪಕ್ಷದ ನಾಯಕ ಎಂದು ತನ್ನ ಪೇಜಿನಲ್ಲಿ ಹಾಕಿಕೊಂಡು ಅಚ್ಚರಿಯನ್ನು ಮೂಡಿಸಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಎನ್‌‍. ರವಿ ಕುಮಾರ್‌ ಅವರನ್ನು ಮರು ಆಯ್ಕೆ ಮಾಡಿತ್ತು. ಇದರ ಜೊತೆಗೆ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸೋಲುಂಡಿದ್ದ ಸಿ.ಟಿ.ರವಿ ಅವರನ್ನು ಮತ್ತು ಮಾರುತಿ ರಾವ್‌ ಮುಳೆ ಅವರನ್ನು ಮೇಲ್ಮನೆಗೆ ಕಳುಹಿಸಿತ್ತು.
ವಿಧಾನಪರಿಷತ್ತಿನಲ್ಲಿ ವಿಪಕ್ಷದ ನಾಯಕರಾಗಿ ಒಂದೋ ಎನ್‌.ರವಿಕುಮಾರ್‌ ಇಲ್ಲವೇ, ಸಿ.ಟಿ.ರವಿ ಆಯ್ಕೆಯಾಗಬಹುದು ಎಂದೇ ಲೆಕ್ಕಾಚಾರವಾಗಿತ್ತು. ಆದರೆ ಈಗ ಛಲವಾದಿ ನಾರಾಯಣಸ್ವಾಮಿಯವರ ಹೆಸರು ಮುನ್ನಲೆಗೆ ಬಂದಿದೆ. ಹೀಗಾಗಿ, ವಿಪಕ್ಷದ ನಾಯಕನ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!