ಉದಯವಾಹಿನಿ, ಬೆಂಗಳೂರು: ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕು ಗೊಳಿಸಿದ್ದಾರೆ. ಇಂದು ಮತ್ತೆ ವಿಚಾರಣೆ ಮುಂದುವರೆದಿದೆ. ಈ ನಡುವೆ ಇಡಿ ದಾಳಿ ನಡೆದಿರುವುದು ತಮಗೆ ಮಾಹಿತಿ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ರಾಜ್ಯಸರ್ಕಾರಕ್ಕೆ ಯಾವುದೇ ಮಾಹಿತಿ ನೀಡು ವುದಿಲ್ಲ. ಸ್ವತಂತ್ರವಾಗಿ ತನಿಖೆ ನಡೆಸುತ್ತಾರೆ. ದಾಳಿ ನಡೆಸುವಾಗಲೂ ಯಾವುದೇ ಮಾಹಿತಿ ನೀಡುವುದಿಲ್ಲ. ಇಂದು ಯಾವ ಹಿನ್ನೆಲೆಗೆ ದಾಳಿ ನಡೆದಿರುವುದು ಎಂದು ತಮಗೆ ಗೊತ್ತಿಲ್ಲ ಎಂದರು.
ಮಾಜಿ ಸಚಿವ ನಾಗೇಂದ್ರ ಮತ್ತು ಶಾಸಕ ದದ್ದಲ್ ಅವರ ಆಪ್ತ ಸಹಾಯಕರ ಹೇಳಿಕೆಗಳನ್ನು ಆಧರಿಸಿ ಎಸ್‌ಐಟಿ ಅಧಿಕಾರಿಗಳು ಇಬ್ಬರನ್ನು ತನಿಖೆಗೆ ಕರೆದಿದ್ದಾರೆ. ರಾಜ್ಯಸರ್ಕಾರ ಇಡೀ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದೆ. ಮತ್ತೊಂದೆಡೆ ಬ್ಯಾಂಕಿನ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಯುತ್ತಿದೆ ಎಂದರು.
ಸಾರ್ವಜನಿಕವಾಗಿ ಚರ್ಚೆ ಯಾಗುವ ವಿಚಾರಗಳ ಬಗ್ಗೆ ಮಾಹಿತಿ ಇಲ್ಲದೆ ನಾವು ಹೇಳಿಕೆ ನೀಡಲು ಸಾಧ್ಯವಿಲ್ಲ. ಎಸ್‌ಐಟಿ ಮತ್ತು ಸಿಬಿಐ ಅಧಿಕಾರಿಗಳು ಅದನ್ನು ಗಮನಿಸುತ್ತಾರೆ. ತನಿಖೆ ನಡೆಯುವ ಹಂತದಲ್ಲಿ ನಾವು ಯಾವುದೇ ಹೇಳಿಕೆಗಳನ್ನೂ ಕೊಡುವಂತಿಲ್ಲ, ಕೊಡಲೂಬಾರದು ಎಂದು ಹೇಳಿದರು. ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಹಗರಣವಾಗಿಲ್ಲ ಎಂದು ಯಾರೂ ಹೇಳಿಲ್ಲ. ಅಕ್ರಮವಾಗಿದೆ ಎಂಬ ಕಾರಣಕ್ಕಾಗಿಯೇ ಎಸ್‌ಐಟಿ ರಚಿಸಿ ತನಿಖೆ ಮಾಡಲಾಗುತ್ತಿದೆ. ಇಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹುಬ್ಬಳ್ಳಿಯ ನೇಹಾ ಹಿರೇಮಠ್ ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿ ದ್ದಾರೆ. ತನಿಖೆಯಲ್ಲಿ ಯಾವ ಮಾಹಿತಿ ತಿಳಿದುಬಂದಿದೆ, ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ವರದಿ ನೀಡಿರುತ್ತಾರೆ. ಬಿಜೆಪಿಯವರು ಹೇಳಿದಂತೆ ಲವ್ ಜಿಹಾದ್ ಅಂಶವನ್ನೂ ಪರಿಶೀಲಿಸಲಾಗಿರುತ್ತದೆ. ಅವರು ಹೇಳಿದಾಕ್ಷಣ ದೋಷಾರೋಪಣ ಪಟ್ಟಿಯಲ್ಲಿ ಅಂತಹ ಅಂಶಗಳನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದರು.
