ಉದಯವಾಹಿನಿ, ಮೈಸೂರು: ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖಾ ವರದಿ ತಮ ಕೈ ಸೇರಿಲ್ಲ ಎಂದು ಹೇಳುವ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಳೆ ಕಳೆದುಕೊಂಡು ಏರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಹಗರಣ ಕುರಿತು ತನಿಖೆಗೆ ಎಸ್ಐಟಿ ರಚಿಸಲಾಗಿದೆ. ಸರ್ಕಾರಕ್ಕೆ ಇನ್ನೂ ವರದಿ ಬಂದಿಲ್ಲ.
ಪ್ರಾಥಮಿಕ ವರದಿಯೂ ಇಲ್ಲ, ಅಂತಿಮ ವರದಿಯೂ ನಮಗೆ ತಲುಪಿಲ್ಲ. ಪೂರ್ಣ ಪ್ರಮಾಣದ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.
ಖಜಾನೆಯಿಂದ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಎದುರಾದಾಗ ಆ ರೀತಿಯಾಗಲು ಸಾಧ್ಯವಿಲ್ಲ ಎಂದು ಸಮರ್ಥನೆ ನೀಡಿದರು. ಬಿಜೆಪಿಯವರು ಹೇಳುತ್ತಾರೆ ಎಂಬ ಕಾರಣಕ್ಕೆ ಮಾಧ್ಯಮದವರು ಆ ರೀತಿಯ ಪ್ರಶ್ನೆಗಳನ್ನು ಕೇಳಬಾರದು. ಹಣ ವರ್ಗಾವಣೆಯಾಗಿರುವುದಕ್ಕೆ ದಾಖಲಾತಿ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದರು.ಇಲಾಖಾವಾರು ಮತ್ತು ನಿಗಮಗಳಿಗೆ ಹಂಚಿಕೆಯಾಗಿರುವ ಅನುದಾನವನ್ನು ಅಧಿಕಾರಿಗಳು ಅನುದಾನ ಲಭ್ಯತೆ ಆಧಾರದ ಮೇಲೆ ಬಿಡುಗಡೆ ಮಾಡುತ್ತಾರೆ. ನನಗೆ ಅದರ ಮಾಹಿತಿ ಬರುವುದಿಲ್ಲ. ಆ ಕಡತಕ್ಕೆ ನಾನು ಸಹಿಯನ್ನೂ ಹಾಕುವುದಿಲ್ಲ. ಹಣ ವರ್ಗಾವಣೆಯಾಗಿರುವ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಇನ್ನೂ ವರದಿ ಬಂದಿಲ್ಲ ಎಂದು ಹೇಳಿದರು. ಆರ್ಥಿಕ ಸಚಿವರಾಗಿರುವ ಸಿದ್ದರಾಮಯ್ಯನವರು ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಬಳಿಕ ನಿರ್ದೋಷಿಯಾದರೆ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಜೆಡಿಎಸ್ನ ಶಾಸಕ ಜಿ.ಟಿ.ದೇವೇಗೌಡರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಬ್ಯಾಂಕ್ ಅವ್ಯವಹಾರವಾಗಿದೆ. ಹಾಗಿದ್ದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜೀನಾಮೆ ನೀಡಬೇಕಲ್ಲವೇ? ಎಂದು ತಿರುಗೇಟು ನೀಡಿದರು.
