ಉದಯವಾಹಿನಿ, ತಿರುಪತಿ: ಆಂಧ್ರಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕರು ಮಾಡಿದ ಪೈಶಾಚಿಕ ಕೃತ್ಯಕ್ಕೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯೊಬ್ಬಳನ್ನು ಮೂವರು ಬಾಲಕರು ಸೇರಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.
ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೂವರು ಬಾಲಕರು ಸೇರಿ ಶಾಲಾ ರಜಾದಿನವಾದ ಭಾನುವಾರ ಈ ಕೃತ್ಯವೆಸಗಿದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಆರೋಪಿ ಬಾಲಕರಲ್ಲಿ ಇಬ್ಬರು 12 ವರ್ಷದವರಾಗಿದ್ದು, ಆರನೇ ತರಗತಿಯಲ್ಲಿ ಓದುತ್ತಿದ್ದಾರೆ. ಹಾಗೆಯೇ ಮತ್ತೊಬ್ಬರ ಆರೋಪಿ ಬಾಲಕ 13 ವರ್ಷದವನಾಗಿದ್ದು 8ನೇ ತರಗತಿಯಲ್ಲಿ ಓದುತ್ತಿದ್ದ. ಕೊಲೆಯಾದ ಬಾಲಕಿ ಹಾಗೂ ಈ ಬಾಲಕರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.
ಮುಚುಮರಿ ಪಾರ್ಕ್‌ನಲ್ಲಿ ಬಾಲಕಿ ಆಟವಾಡುತ್ತಿರುವುದನ್ನು ಗಮನಿಸಿದ ದುರುಳ ಬಾಲಕರು ಆಕೆಯನ್ನು ತಮ್ಮೊಂದಿಗೆ ಆಟವಾಡಲು ಬರುವಂತೆ ಕರೆದಿದ್ದಾರೆ. ಬಳಿಕ ನೀರಾವರಿ ಯೋಜನೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಆಕೆಯ ಬಾಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿ ಒಬ್ಬರಾದ ಮೇಲೊಬ್ಬರಂತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದಾದ ನಂತರ ಬಾಲಕರಿಗೆ ಆಕೆ ತನ್ನ ಪೋಷಕರಿಗೆ ತಮ್ಮ ಬಗ್ಗೆ ಹೇಳಿದರೆ ಎಂಬ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ ಪಾಪಿಗಳು ಬಳಿಕ ಆಕೆಯ ದೇಹವನ್ನು ನೀರಿಗೆ ಎಸೆದಿದ್ದಾರೆ ಎಂದು ಬಾಲಕರು ಪೋಲಿಸರ ಮುಂದೆ ಒಪ್ಪಿಕೊಂಡಿದ್ಧಾರೆ.

Leave a Reply

Your email address will not be published. Required fields are marked *

error: Content is protected !!