ಉದಯವಾಹಿನಿ, ಬೆಂಗಳೂರು: ಛಲ ಬಿಡದ ಹೋರಾಟಗಾರ್ತಿ ಅಮೋಘ ನಿರೂಪಣಾ ಶೈಲಿಯ ಮೂಲಕ ಕನ್ನಡ ಭಾಷೆ ಬೆಳಗಿಸಿದ ಶ್ರೇಷ್ಠ ಕನ್ನಡತಿ ಅಪರ್ಣಾ ಕನ್ನಡ ನಾಡಿನ ಮನೆ ಮಾತಾಗಿದ್ದಾರೆ. ತಮ ಮಾತಿನ ಶೈಲಿಯಿಂದಲೇ ಜನಮನ್ನಣೆ ಗಳಿಸಿದವರು. ಮೂಲತಃ ಚಿಕ್ಕಮಗಳೂರಿನ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯವರಾದ 1966 ಅಕ್ಟೋಬರ್ 14 ರಂದು ನಾರಾಯಣಸ್ವಾಮಿ ಮತ್ತು ಪದಾವತಿಯ ದಂಪತಿಯ ಮಗಳಾಗಿ ಜನಿಸಿದರು.ಆದರೆ ಇವರು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕುಮಾರಪಾರ್ಕ್ನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಎಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಅಪರ್ಣಾ ಅವರ ತಂದೆ ನಾರಾಯಣಸ್ವಾಮಿ ಪ್ರಸಿದ್ಧ ಪತ್ರಿಕೆಯಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನಾರಾಯಣಸ್ವಾಮಿಯವರಿಗೆ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕಣಗಾಲ್ರವರು ಅಪರ್ಣಾ ಅವರ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದ್ದರು.
ಹೀಗೆ 1984 ರಲ್ಲಿ ಮಸಣದ ಹೂವು ಚಿತ್ರದಿಂದ ತಮ ಸಿನಿಮಾ ಪ್ರಯಾಣ ಆರಂಭಿಸಿದ ಅಪರ್ಣಾ ನಂತರದಲ್ಲಿ ಇನ್ಸ್ಪೆಕ್ಟರ್ ವಿಕ್ರಂ, ನಮೂರ ರಾಜ, ಸಾಹಸವೀರ, ಡಾ.ಕೃಷ್ಣ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಮನ್ನಣೆ ಗಳಿಸಿದರು. ಹಿರಿಯ ನಟರಾದ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಟೈಗರ್ ಪ್ರಭಾಕರ್ ಹಾಗೂ ಶಿವರಾಜ್ಕುಮಾರ್ ಸೇರಿದಂತೆ ಹಲವು ನಟರೊಂದಿಗೆ ಬೆಳ್ಳಿತೆರೆಯಲ್ಲಿ ಮಿಂಚಿದರು. ಇವರ ನಟನೆಯ ಕೊನೆಯ ಚಿತ್ರ ಗ್ರೇ ಗೇಮ್ಸೌ ಆಗಿತ್ತು.
1993 ರಿಂದ 2010 ರವರೆಗೂ ರೇಡಿಯೋ ಆರ್ಜೆ ಆಗಿಯೂ ಕಾರ್ಯ ನಿರ್ವಹಿಸಿದರು. 90 ರ ದಶಕದಲ್ಲಿ ದೂರದರ್ಶನ ಆಕಾಶವಾಣಿ ಕಾರ್ಯಕ್ರಮಗಳ ನಿರೂಪಣಾ ಶೈಲಿ ಅಪರ್ಣಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟವು. ಸರ್ಕಾರದ ಕಾರ್ಯಕ್ರಮಗಳು, ವಿವಿಧ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಅಪರ್ಣಾ ಅವರ ನಿರೂಪಣೆಯೇ ಇರುತ್ತಿತ್ತು. ಭಾಷಾ ಶ್ರೀಮಂತಿಕೆಗೆ ಮೆರಗು : ಕನ್ನಡ ಭಾಷಾ ಸೌಂದರ್ಯ ಹೆಚ್ಚಿಸಿದ ನಿರೂಪಕಿ ಎಂದರೆ ತಪ್ಪಾಗಲಾರದು. ನಿರೂಪಣೆ ಎಂದರೆ ಕೇವಲ ಮಾತಲ್ಲ. ಕನ್ನಡದ ಕಂಪು, ಸಾಹಿತ್ಯ ಧಾರೆ, ಭಾಷಾ ಶ್ರೀಮಂತಿಕೆಯನ್ನು ತೋರಿಸಿಕೊಟ್ಟವರು ಅಪರ್ಣಾ. ಇದೇ ಕಾರಣಕ್ಕೆ ನಿರೂಪಣಾ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೀರ್ತಿ ಅವರದ್ದಾಯಿತು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆ ಕಾಲ ನಿರೂಪಣೆ ನಿರ್ವಹಿಸಿದ ದಾಖಲೆಯೂ ಅಪರ್ಣಾ ಅವರ ಹೆಸರಿನಲ್ಲಿದೆ.
