ಉದಯವಾಹಿನಿ, ಕುಷ್ಟಗಿ: ಅನೇಕ ಕಡೆಗಳಲ್ಲಿ ಡೆಂಗಿ ಬಾಧೆ ಉಲ್ಬಣಿಸುತ್ತಿರುವುದು ಮತ್ತು ಪಟ್ಟಣದಲ್ಲಿ ಬಹುತೇಕ ವಾರ್ಡುಗಳಲ್ಲಿ ಮಾಲಿನ್ಯ ಮಡುಗಟ್ಟಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.ತಾಲ್ಲೂಕಿನಲ್ಲಿ ಈ ಹಿಂದೆ ವರದಿಯಾಗಿದ್ದ ಹಳೆಯ 7 ಪ್ರಕರಣಗಳ ಪೈಕಿ ಎಲ್ಲರೂ ಚಿಕಿತ್ಸೆ ನಂತರ ಗುಣಮುಖರಾಗಿದ್ದಾರೆ.
ಪಟ್ಟಣದಲ್ಲಿ ಈಗ ಒಂದು ಡೆಂಕಿ ಪ್ರಕರಣ ದೃಢಪಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿದ್ದು ರಕ್ತ ತಪಾಸಣೆ, ಮನೆ ಮತ್ತಿತರೆ ಕಡೆಗಳಲ್ಲಿ ವಾರದವರೆಗೂ ನೀರಿನ ಸಂಗ್ರಹ ಇರುವುದನ್ನು ಪತ್ತೆ ಮಾಡಿ ಲಾರ್ವಾಗಳು ಹುಟ್ಟಿಕೊಳ್ಳದಂತೆ ಜಾಗೃತಿ ಮೂಡಿಸುವ ಮೂಲಕ ಸೊಳ್ಳೆಗಳ ಮೂಲಕ ಹರಡುವ ಡೆಂಗಿ ಮತ್ತಿತರೆ ಸಾಂಕ್ರಾಮಿಕ ರೋಗಗಳ ಕುರಿತು ತಿಳಿವಳಿಕೆ ಮೂಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮುತುವರ್ಜಿ ವಹಿಸಿದ್ದಾರೆ.
ಆರೋಗ್ಯ ಇಲಾಖೆ ಡೆಂಗಿ ನಿಯಂತ್ರಣಕ್ಕೆ ಮುಂದಾಗಿದ್ದರೂ ಪಟ್ಟಣದಲ್ಲಿ ಮಾಲಿನ್ಯ ಸಮಸ್ಯೆ ಎದುರಾಗಿದೆ. ಈ ವಿಷಯ ಕುರಿತಂತೆ ಗುರುವಾರ ಪುರಸಭೆಗೆ ಪತ್ರ ಬರೆದಿರುವ ತಾಲ್ಲೂಕು ಆರೋಗ್ಯ ಇಲಾಖೆ, ನೈರ್ಮಲ್ಯ ವ್ಯವಸ್ಥೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದು, ಸೊಳ್ಳೆನಾಶಕ, ಬ್ಲೀಚಿಂಗ್ ಇತರೆ ರಾಸಾಯನಿಕಗಳನ್ನು ಡೆಂಗಿ ಕಾಣಿಸಿಕೊಂಡಿರುವ ವಾರ್ಡಿನ ಎಲ್ಲ ಮನೆಗಳ ಒಳಗಿನ ಭಾಗದಲ್ಲಿಯೂ ಸಿಂಪಡಣೆ (ಫಾಗಿಂಗ್) ಮಾಡುವಂತೆ ಮುಖ್ಯಾಧಿಕಾರಿಗೆ ಸಲಹೆ ನೀಡಿದೆ.
