ಉದಯವಾಹಿನಿ, ಉಡುಪಿ: ಮಳೆಗಾಲ ಬಂತೆಂದರೆ ಕುರುಚಲು ಕಾಡು, ಗಿಡಗಂಟಿಗಳ ಮಧ್ಯೆ ಆವಾಸಸ್ಥಾನ ಮಾಡಿಕೊಂಡಿರುವ ಸರೀಸೃಪಗಳು ಹೆಚ್ಚಾಗಿ ಜನವಸತಿ ಪ್ರದೇಶಗಳತ್ತ ಬರುತ್ತವೆ.ಜೋರು ಮಳೆ ಬಂದು ಪ್ರವಾಹ ಬಂದಾಗ ಅದರಲ್ಲಿ ತೇಲಿ ಬರುವ ಹಾವುಗಳೂ ಕೂಡ ಬೆಚ್ಚನೆಯ ಜಾಗ ಹುಡುಕಿ ಜನರು ವಾಸಿಸುವ ಸ್ಥಳಗಳತ್ತ ನುಗ್ಗುತ್ತವೆ.
ತೋಟ, ಗದ್ದೆಗಳಲ್ಲಿ ಕೆಲಸ ಮಾಡುವವರು, ಹುಲ್ಲಿನ ಪ್ರದೇಶಗಳಲ್ಲಿ ನಡೆದಾಡುವವರು ಎಚ್ಚರ ವಹಿಸದಿದ್ದರೆ ಹಾವುಗಳ ಕಡಿತಕ್ಕೊಳಗಾಗುವ ಸಾಧ್ಯತೆ ಹೆಚ್ಚು. ಹಾವಿನ ಕಡಿತ ಪ್ರಕರಣಗಳು ಮಳೆಗಾಲದಲ್ಲೇ ಹೆಚ್ಚಾಗಿ ವರದಿಯಾಗುತ್ತಿವೆ.
ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 151 ಹಾವಿನ ಕಡಿತದ ಪ್ರಕರಣಗಳು ದಾಖಲಾಗಿವೆ ಎನ್ನುತ್ತವೆ ಜಿಲ್ಲಾಧಿಕಾರಿ ಕಚೇರಿ ಮೂಲಗಳು.
ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಹಾವಿನ ಕಡಿತಕ್ಕೊಳಗಾದ 26 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಅನೇಕ ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಾವಿನ ಕಡಿತಕ್ಕೊಳಗಾದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಿಂದ ಇಂತಹ ವ್ಯಕ್ತಿಗಳನ್ನು ದೂರದ ಆಸ್ಪತ್ರೆಗೆ ಕರೆದೊಯ್ಯುವಾಗ ತಡವಾದರೆ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳೂ ಇವೆ. ಹಾವಿನ ಕಡಿತಕ್ಕೊಳಗಾಗಿಯೂ ಅದನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
