ಉದಯವಾಹಿನಿ, ಬೆಂಗಳೂರು: ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾಗಿದ್ದ ನಾಗಮ ಕೇಶವಮೂರ್ತಿ, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ನಿರೂಪಕಿ ಅಪರ್ಣಾ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.
ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನೆಯನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾಗಮ ಕೇಶವಮೂರ್ತಿಯವರು ಸಾಮಾಜಿಕ ಸೇವೆಯಲ್ಲಿ ಮದರ್ ಥೆರೇಸಾ, ರಾಜಕಾರಣದಲ್ಲಿ ದಾವಣಗೆರೆ ಇಂದಿರಾಗಾಂಧಿ ಎಂದೇ ಖ್ಯಾತಿ ಪಡೆದಿದ್ದರು. ಶ್ರೀನಿವಾಸ್ ಪ್ರಸಾದ್ ಅವರು, ಆರು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ಶೋಷಿತರ, ದೀನ ದಲಿತರ ಹಿಂದುಳಿದವರ ಧ್ವನಿಯಾಗಿದ್ದರು ಎಂದು ಗುಣಗಾನ ಮಾಡಿದರು.
ದ್ವಾರಕೀಶ್ ಅವರು ಖ್ಯಾತ ಹಾಸ್ಯನಟರಾಗಿದ್ದು, ನಿರ್ಮಾಪಕ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಿಂಗಾಪುರದಲ್ಲಿ ರಾಜಾ ಕುಳ್ಳ ಎಂಬುದು ವಿದೇಶದಲ್ಲೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಸರಿಸಿದರು.ಸಾಹಿತಿ ಕಮಲಾ ಹಂಪನಾ ಅವರು ಜೈನ ಧರ್ಮ, ಹಳಗನ್ನಡ ಗ್ರಂಥ ಸಂಪಾದನೆ ಮಾಡಿದ್ದರು. ದಾನ ಚಿಂತಾಮಣಿ, ಅತ್ತಿಮಬ್ಬೆ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು. ನಾಡೋಜ ಗೌರವವೂ ಅವರಿಗೆ ಸಂದಿತ್ತು ಎಂದು ಹೇಳಿದರು.
