ಉದಯವಾಹಿನಿ, ಬೆಂಗಳೂರು: ಡೆಂಗ್ಯೂ  ಪ್ರಕರಣಗಳಿಗೆ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ದರ ತೆಗೆದುಕೊಂಡರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸದಸ್ಯ ಧನಂಜಯ್ಯ ಸರ್ಜಿ ಪರವಾಗಿ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ. ಇದನ್ನು ಮೀರಿ ಸಾರ್ವಜನಿಕರಿಂದ ಹೆಚ್ಚಿನ ಹಣ ತೆಗೆದುಕೊಂಡರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಕೆ ಕೊಟ್ಟರು.
ಡೆಂಗ್ಯೂ  ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕೋವಿಡ್ ಮಾದರಿಯಲ್ಲಿ ನಿಯಂತ್ರಣ ಮಾಡಬೇಕೆಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಜೊತೆಗೆ ಟಾಸ್ಕ್ಫೋರ್ಸ್ ಕೂಡ ರಚನೆ ಮಾಡಲಾಗಿದೆ ಎಂದು ವಿವರಿಸಿದರು.
ಎರಡಕ್ಕಿಂತ ಹೆಚ್ಚು ಡೆಂಗ್ಯೂ  ಪ್ರಕರಣಗಳು ಕಂಡುಬಂದರೆ ಅದನ್ನು ಹಾಟ್ಸ್ಪಾಟ್ ಎಂದು ಘೋಷಣೆ ಮಾಡಲಾಗುವುದು. ಅಲ್ಲದೆ ಈ ಪ್ರದೇಶದಲ್ಲಿ ಹೆಚ್ಚಿನ ಡೆಂಗ್ಯೂ  ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಈಗಾಗಲೇ ಸಮಾರೋಪಾದಿಯಲ್ಲಿ ಕೆಲಸಗಳನ್ನು ಕೈಗೊಂಡಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!