
ಉದಯವಾಹಿನಿ, ಬೆಂಗಳೂರು: ಇಂದು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್, ಗಂಗಾಧರ ಅಜ್ಜನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಯಾರು ಈ ಗಂಗಾಧರ ಅಜ್ಜ? ಅವರ ಹೆಸರಲ್ಲೇ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದು ಯಾಕೆ? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೂ ನಮ್ಮಲ್ಲಿದೆ ಉತ್ತರ.ತುಮಕೂರು ಜಿಲ್ಲೆಯಲ್ಲಿರುವ ನೊಣವಿನ ಕೆರೆ ಎಂಬಲ್ಲಿ ಇರುವ ಕಾಡಸಿದ್ಧೇಶ್ವರ ಮಠ ಪ್ರಬಲ ಪರಂಪರೆ ಹೊಂದಿರುವ ಪೀಠ. ಇಲ್ಲಿನ ಪ್ರಸ್ತುತ ಪೀಠಾಧಿಪತಿ, ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು. ಇದು ಗಂಗಾಧರ ಅಜ್ಜಯ್ಯನವರ ಮೂಲ ಗದ್ದುಗೆ ಇದೆ. ಇಲ್ಲಿನ ಗದ್ದುಗೆಗೆ ಡಿಕೆಶಿ ಬಹುಕಾಲದಿಂದ ನಿಷ್ಠಾವಂತ ಭಕ್ತರಾಗಿ ನಡೆದುಕೊಂಡು ಬರುತ್ತಿದ್ದಾರೆ.ಇದೇ 14ನೇ ತಾರೀಕಿನಂದು ಮತ ಎಣಿಕೆ ನಡೆದು ಕಾಂಗ್ರೆಸ್ಗೆ ಸ್ಪಷ್ಟ ಬಹುಮತದ ಗೆಲುವು ಕಾಣುತ್ತಿದ್ದಂತೆಯೇ ಡಿಕೆಶಿ ಮೊದಲು ಮಾಡಿದ್ದು ಏನೆಂದರೆ ನೊಣವಿನಕೆರೆಯ ಕಾಡುಸಿದೇಶ್ವರ ಮಠಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡದ್ದು! ಅದಕ್ಕೂ ಮೊದಲೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಹಸ್ಯ ಪೂಜೆಯನ್ನೂ ನಡೆಸಿದ್ದರು ಎನ್ನಲಾಗಿದೆ.ಮೇ 14ನೇ ತಾರೀಕಿನಂದು ಕಾಡುಸಿದೇಶ್ವರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ‘ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠ ನನಗೆ ಪುಣ್ಯದ ದೈವ ಕ್ಷೇತ್ರ. ಪ್ರತಿಯೊಂದು ಸಂಧರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎನ್ನುವುದನ್ನು ಇಲ್ಲೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ’ ಎಂದು ಹೇಳಿದ್ದರು.ಹಲವಾರು ಸಂದರ್ಭಗಳಲ್ಲಿ ಇಲ್ಲಿನ ಅಜ್ಜಯ್ಯನವರು ನನಗೆ ಮಾನಸಿಕವಾಗಿ ಧೈರ್ಯ ನೀಡಿದ್ದಾರೆ ಎಂದು ಡಿಕೆಶಿ ಹೇಳಿಕೊಳ್ಳುತ್ತಾರೆ. ಇನ್ನು ಹೆಲಿಕಾಪ್ಟರ್ ದುರಂತ ಆದ ನಂತರವೂ ಡಿಕೆಶಿ ಮಗಳು ಇಲ್ಲಿಗೆ ಬಂದು ಹೋಗಿದ್ದರು. ಈ ಹಿಂದೆ ಡಿಕೆಶಿ, ‘ಈ ಚುನಾವಣೆಯಲ್ಲಿ ನಾನು 134 ಸೀಟು ಗೆಲ್ಲಬೇಕು, ಯಾರ ಹಂಗಿನಲ್ಲೂ ಅಧಿಕಾರ ನಡೆಸಬಾರದು ಎಂದು ಬೇಡಿಕೊಂಡಿದ್ದೆ’ ಎಂದು ಬಹಿರಂಗ ಪಡಿಸಿದ್ದರು.
