ಉದಯವಾಹಿನಿ , ಬೆಳಗಾವಿ: ಅನೈತಿಕ ಸಂಬಂಧ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಸಿಕ್ಕ ಸಿಕ್ಕ ಕಡೆ ಕೊಚ್ಚಿ ಬರ್ಬರ ಹತ್ಯೆ (Murder Case) ಮಾಡಿರುವ ಘಟನೆ ಬೆಳಗಾವಿ (Belagavi news) ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ನಡೆದಿದೆ. ತನ್ನ ತಾಯಿಯ ಜೊತೆಗೇ ಅನೈತಿಕ ಸಂಬಂಧ ಹೊಂದಿದ್ದವನನ್ನು ಮಗ ಕೊಚ್ಚಿ ಕೊಂದಿದ್ದಾನೆ. ಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದ ವ್ಯಕ್ತಿಯಾಗಿದ್ದು, ಈರಯ್ಯ ಮಠಪತಿ ಆರೋಪಿಯಾಗಿದ್ದಾನೆ. ಭೀಕರ ಕೊಲೆ ಕಂಡು ಗ್ರಾಮವೇ ಬೆಚ್ಚಿ ಬಿದ್ದಿದೆ.

10 ವರ್ಷಗಳ ಹಿಂದೆ ಈರಯ್ಯನ ತಾಯಿ ಜೊತೆ ಬಸಪ್ಪ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಓಡಿಹೋಗಿದ್ದ. ಈ ವೇಳೆ ಆರೋಪಿ ಈರಯ್ಯನಿಗೆ 18 ವರ್ಷ ವಯಸ್ಸು. ಹಲವು ವರ್ಷಗಳ ಬಳಿಕ ಈರಯ್ಯನ ತಾಯಿಯನ್ನ ಕೊಲ್ಹಾಪುರದಲ್ಲಿ ಬಿಟ್ಟು ಗ್ರಾಮಕ್ಕೆ ನಾಲ್ಕು ದಿನಗಳ ಹಿಂದೆಯಷ್ಟೇ ಬಸಪ್ಪ ಬಂದಿದ್ದ. ಇದೇ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದ ಆರೋಪಿ ಈರಯ್ಯ ಆತನನ್ನು ಕೊಲೆ ಮಾಡಿದ್ದಾನೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಾಲ್ಕು ದಿನಗಳ ಹಿಂದೆ ಹೊಸದಾಗಿ ಬಸಪ್ಪ ಜಾಗ ಹುಡುಕಿ ಮನೆ ಕಟ್ಟಲು ಪ್ಲಾನ್ ಮಾಡಿದ್ದ. ಈ ವಿಚಾರ ತಿಳಿದ ಈರಯ್ಯ ಬಸಪ್ಪನ ಬೈಕ್ ಅಡ್ಡಗಟ್ಟಿ ಆತನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ 16 ಬಾರಿ ಇರಿದು ಕೊಲೆ ಮಾಡಿದ್ದಾನೆ. ಬಸಪ್ಪ ಹೊಸಮನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಸಿನಿಮಾ ಸ್ಟೈಲ್​ನಲ್ಲಿ ಶವದ ಮೇಲೆ ಕಾಲಿಟ್ಟು ನಿಂತು ಆರೋಪಿ ಈರಯ್ಯನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತಿದ್ದ. ಪ್ರಕರಣ ಸಂಬಂಧ ಆರೋಪಿ ಈರಯ್ಯನ ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!