ಉದಯವಾಹಿನಿ , ಬೆಂಗಳೂರು: ಕೇಂದ್ರ ಸರ್ಕಾರದ ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G)’ ಕಾಯ್ದೆಯನ್ನು ರದ್ದುಪಡಿಸಿ ಮತ್ತು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಮರುಸ್ಥಾಪಿಸಲು ಒತ್ತಾಯಿಸಿ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ನಿರ್ಣಯ ಮಂಡಿಸಿದರು.
ಪ್ರಸ್ತಾವನೆ: ಈ ಸದನವು, ಭಾರತದ ಪ್ರಜಾಸತ್ತೆಯ ಭದ್ರಬುನಾದಿಯಾದ ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅಧಿಕಾರ ವಿಕೇಂದ್ರೀಕರಣದ ತತ್ವಗಳಿಗೆ ತನ್ನ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಗ್ರಾಮೀಣ ಬಡವರ ಪಾಲಿನ ‘ಸಂಜೀವಿನಿ’ಯಾಗಿದ್ದ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ “ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಯನ್ನು (MGNREGA) ರದ್ದುಗೊಳಿಸಿರುವುದನ್ನು ಈ ಸದನವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಹೊಸ ‘ವಿಬಿ-ಗ್ರಾಮ್ ಜಿ’ (VB-GRAM-G) ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ.
ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಸಲುವಾಗಿ 2005ರಲ್ಲಿ ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿರ್ಮೂಲನೆ, ವಲಸೆ ತಡೆ, ಲಿಂಗ ತಾರತಮ್ಯವಿಲ್ಲದೆ ವೇತನ ನೀಡುವಿಕೆ, ಪಂಚಾಯತ್ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಮುದಾಯ ಆಸ್ತಿಗಳ ಸೃಜನೆಯಿಂದ ಕ್ರಾಂತಿಕಾರಿ ಬದಲಾವಣೆ ತಂದಿದೆ.
