
ಉದಯವಾಹಿನಿ , ಚಿತ್ರದುರ್ಗ ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗಿದ್ದರು. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ ಸುಮಾರು 7,880 ರೈತರಿಗೆ ಒಟ್ಟು 12.40 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.
ಸಂಸದ ಗೋವಿಂದ ಕಾರಜೋಳ ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಆರ್.ಎನ್.ಕೆ. ಠಾಕೂರ್ ಅವರು ಲಿಖಿತ ಉತ್ತರ ನೀಡಿದ್ದಾರೆ. ಈ ಉತ್ತರದಲ್ಲಿ 2016ರಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಇದುವರೆಗೆ ರಾಜ್ಯದ 1.34 ಕೋಟಿ ಅರ್ಜಿಗಳಿಗೆ ಒಟ್ಟು 18,783 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿ ಬಿಡುಗಡೆಯಾದ 12.40 ಕೋಟಿ ರೂ. ಪರಿಹಾರವು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಮಹತ್ವದ ಆರ್ಥಿಕ ನೆರವಾಗಿದ್ದು, ಅವರ ಜೀವನೋಪಾಯಕ್ಕೆ ಹೊಸ ಭರವಸೆ ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
