ಉದಯವಾಹಿನಿ, ಮಂಗಳೂರು: ವಸತಿ ಪ್ರದೇಶ, ಸಾರ್ವಜನಿಕರ ಸ್ಥಳಗಳಲ್ಲಿ ಹಾವು ಬಂದಾಗ ಬರುವ ಕರೆಗಳಿಗೆ ಸ್ಪಂದಿಸಿ ತಕ್ಷಣ ಆ ಪ್ರದೇಶಕ್ಕೆ ಧಾವಿಸಿ ಹಾವನ್ನು ರಕ್ಷಿಸುವ ಜೊತೆಗೆ ಜನರಲ್ಲಿ ನಿರಾಳ ಭಾವ ಮೂಡಿಸುವ ಉರಗ ರಕ್ಷಕರಿಗೆ ವೃತ್ತಿ ಭದ್ರತೆ ಇಲ್ಲದಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಪ್ರತ್ಯೇಕ ಅರಣ್ಯ ಘಟಕವಿದ್ದು, ಇಲ್ಲಿ ನೇಮಕಗೊಂಡಿರುವ ಉರಗ ರಕ್ಷಕರಿಗೆ ಮಾಸಿಕ ಗೌರವಧನ ಪಾವತಿಯಾಗುತ್ತದೆ.ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಇನ್ನುಳಿದ ಸ್ಥಳೀಯ ಸಂಸ್ಥೆಗಳಲ್ಲಿ ಈ ಸೌಲಭ್ಯ ಇನ್ನೂ ಅನುಷ್ಠಾನಗೊಂಡಿಲ್ಲ, ಉರಗ ರಕ್ಷಕರು ಸ್ವಂತ ವೆಚ್ಚದಲ್ಲಿ ಸ್ಥಳಕ್ಕೆ ತೆರಳಿ ಹಾವನ್ನು ಹಿಡಿದು ಕಾಡಿಗೆ ಬಿಡಬೇಕು ಅಥವಾ ಜನರು ವಾಹನದ ಇಂಧನ ವೆಚ್ಚ ನೀಡಿದರೆ ಅದಕ್ಕೆ ತೃಪ್ತಿಪಟ್ಟುಕೊಳ್ಳಬೇಕು. ಜನರ ಕರೆಗಳಿಗೆ ಓಗೊಡುವ ತಮಗೆ ಅರಣ್ಯ ಇಲಾಖೆಯಿಂದ ಅಧಿಕೃತ ಗುರುತಿನ ಚೀಟಿ ನೀಡುವ ವ್ಯವಸ್ಥೆ ಸಹ ಇಲ್ಲ ಎಂಬುದು ಉರಗ ರಕ್ಷಕರ ಅಳಲು.’ಉರಗ ರಕ್ಷಕರಿಗೆ ಯಾವುದೇ ಆರ್ಥಿಕ ಭದ್ರತೆ ಇಲ್ಲ. ಹಾವು ಹಿಡಿಯುವ ಸಲಕರಣೆಗಳನ್ನು ಸ್ವಂತ ವೆಚ್ಚದಲ್ಲಿ ಖರೀದಿಸಬೇಕು. ರಕ್ಷಣೆಯ ಸಂದರ್ಭದಲ್ಲಿ ಅಕಸ್ಮಾತ್ ಹಾವು ಕಚ್ಚಿದರೆ, ಚಿಕಿತ್ಸೆಗೆ ₹1.5 ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತದೆ. ಅದನ್ನು ನಾವೇ ಭರಿಸಬೇಕು. ಅರಣ್ಯ ಇಲಾಖೆಯಿಂದ ಪ್ರಮಾಣೀಕೃತ ಗುರುತಿನ ಕಾರ್ಡ್ ದೊರೆಯುತ್ತಿಲ್ಲ. ದಿನಕ್ಕೆ 2-3 ಕರೆಗಳಾದರೂ ಬರುತ್ತವೆ. ಕೆಲವೊಮ್ಮೆ ಹಾವು ಬಂದಿರುವ ಸ್ಥಳ ತಲುಪಲು ಆರೆಂಟು ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಇಂಧನ ವೆಚ್ಚವೇ ದೊಡ್ಡ ಭಾರ. ಪ್ರತಿ ನಗರದಲ್ಲಿ ನನ್ನಂತೆ ಹತ್ತಾರು ಉರಗ ರಕ್ಷಕರು ಇದ್ದು, ಎಲ್ಲರ ಅನುಭವಗಳು ಇದೇ ಆಗಿವೆ.
