ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ಪ್ರತಿಪಕ್ಷ ಬಿಜೆಪಿ ಸದನದೊಳಗೆ ಮುಜುಗರಕ್ಕೀಡಾಗುತ್ತಿದೆ. ಅದರಲ್ಲೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಸದನದಲ್ಲಿ ಪರೋಕ್ಷವಾಗಿ ನಡೆಸಿದ ವಾಗ್ದಾಳಿ, ಮಾಡಿರುವ ಟೀಕೆ ಬಿಜೆಪಿಯೊಳಗೆ ಮತ್ತೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕೆಂದು ಬಿಜೆಪಿ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ವಾಲೀಕಿಯಲ್ಲಿ ನಡೆದ ಭ್ರಷ್ಟಾಚಾರ, ಮೂಡಾ ನಿವೇಶನ ಹಂಚಿಕೆ ಅಕ್ರಮ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವೈಫಲ್ಯಗಳನ್ನು ಸದನದ ಮುಂದಿಟ್ಟು ಹೋರಾಟ ನಡೆಸಬೇಕೆಂಬುದು ಕೇಂದ್ರ ಬಿಜೆಪಿ ವರಿಷ್ಠರ ಸೂಚನೆಯಾಗಿತ್ತು. ಆದರೆ ಸರ್ಕಾರವನ್ನು ಬೆತಲು ಮಾಡುತ್ತೇವೆ ಎಂದು ಅಧಿವೇಶನಕ್ಕೂ ಮೊದಲೇ ಗುಡುಗಿದ್ದ ಬಿಜೆಪಿ ಇದೀಗ ಸದನದಲ್ಲಿ ತಾನೇ ಮುಜುಗರಕ್ಕೆ ಸಿಲುಕಿ ತಲೆ ತಗ್ಗಿಸುವಂತಾಗಿದೆ. ಏಕೆಂದರೆ ಬಿಜೆಪಿಯ ಖಾಯಂ ವಿರೋಧ ಪಕ್ಷದ ನಾಯಕನೆಂದೇ ಗುರುತಿಸಿಕೊಂಡಿರುವ ಯತ್ನಾಳ್ ಸದನದೊಳಗೆ ಆಡಿರುವ ಮಾತುಗಳು ವಿರೋಧ ಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ಸಿಕ್ಕುವಂತೆ ಮಾಡಿದೆ.
ಸದನದಲ್ಲಿ ಯತ್ನಾಳ್ ಎದ್ದು ನಿಂತರೆಂದರೆ, ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಜೊತೆಗೆ ಸ್ವಪಕ್ಷದ ನಾಯಕರನ್ನೇ ಪದೇ ಪದೇ ಚುಚ್ಚುತ್ತಾರೆ. ಸದನದಲ್ಲೇ ತಮ ಪಕ್ಷದ ನಾಯಕರ ವಿರುದ್ಧ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಆರೋಪ ಮಾಡುತ್ತಿದ್ದಾರೆ.
