ಉದಯವಾಹಿನಿ, ಬೆಂಗಳೂರ : ಹಿರಿಯ ಪೊಲೀಸ್‌‍ ಅಧಿಕಾರಿಗಳು ಪ್ರತಿದಿನ ಕನಿಷ್ಠ ಪಕ್ಷ ಒಂದು ಠಾಣೆಗೆ ಭೇಟಿ ನೀಡಬೇಕು, ಘೋರ ಅಪರಾಧಗಳು ನಡೆದ ಸಂದರ್ಭದಲ್ಲಿ ತಕ್ಷಣ ಆ ಸ್ಥಳಕ್ಕೆ ಭೇಟಿ ನೀಡಬೇಕೆಂದು ರಾಜ್ಯದ ಪೊಲೀಸ್‌‍ ಮಹಾ ನಿರ್ದೇಶಕರಾದ ಡಾ.ಅಲೋಕ್‌ ಮೋಹನ್‌ ಅವರು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಡಿಜಿ ಕಚೇರಿಯಲ್ಲಿ ಇತ್ತೀಚಗೆ ನಡೆದ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರು ಪಾಲ್ಗೊಂಡು ಕೆಲವು ಸೂಚನೆಗಳನ್ನು ನೀಡಿದ್ದರು.ಈ ಹಿನ್ನೆಲೆಯಲ್ಲಿ ಡಿಜಿಯವರು 20 ಅಂಶಗಳ ಪಟ್ಟಿ ಮಾಡಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ತಿಳಿಸಿದ್ದಾರೆ.
ಎಸ್‌‍ಪಿ, ಡಿಸಿಪಿ, ಐಜಿಪಿ, ಡಿಐಜಿ, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಪ್ರತಿದಿನ ಕನಿಷ್ಟ ಒಂದು ಠಾಣೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು. ಪೊಲೀಸರು ನಾಗರಿಕ ಕೇಂದ್ರಿತ ವಿಧಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಕ್ಲಬ್‌ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲಾ ಸಂಘಟಿತ ಅಪರಾಧಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಬೇಕು. ರಾಜ್ಯವನ್ನು ಮಾದಕದ್ರವ್ಯ ಮುಕ್ತವನ್ನಾಗಿ ಮಾಡಲು ಪ್ರತಿದಿನವೂ ಆ ಬಗ್ಗೆ ತೀವ್ರ ಕಾರ್ಯಾಚರಣೆ ನಡೆಸಬೇಕು. ಎಲ್ಲಾ ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇ-ಬೀಟ್‌ ಅಪ್ಲಿಕೇಷನ್‌ ನಿರ್ವಹಣೆಯನ್ನು ಅರಿತು ಅರ್ಥಪೂರ್ಣವಾಗಿ ಅನುಷ್ಠಾನ ಮಾಡಬೇಕು.ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 9 ರಿಂದ 11 ರವರೆಗೆ ಮತ್ತು ಸಂಜೆ 6 ರಿಂದ 9 ರವರೆಗೆ ಪೊಲೀಸ್‌‍ ಸಮವಸ್ತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ಮಾಡಬೇಕು.

Leave a Reply

Your email address will not be published. Required fields are marked *

error: Content is protected !!