ಉದಯವಾಹಿನಿ, ಬೀದರ್: ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಾಮಸ್ವಾಮಿ ಪೇರಿಯಾರ್ ಪ್ರೌಢಶಾಲೆಯ ವಯೋ ನಿವೃತ್ತ ಶಿಕ್ಷಕ ಅನಂತ ಕುಲಕರ್ಣಿ ಅವರನ್ನು ಈಚೆಗೆ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.
ಗ್ರಾಮದ ರಂಗ ಮಂದಿರದಿಂದ ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ, ಡೋಹರ ಕಕ್ಕಯ್ಯ ವೃತ್ತದ ಮಾರ್ಗವಾಗಿ ಬಸವ ಮಂಟಪ ದವರೆಗೆ ಅದ್ದೂರಿ ಮೆರವಣಿಗೆ ನಡೆಸಿದರು.
ಮಾರ್ಗ ಮಧ್ಯೆ ಪಟಾಕಿಗಳ ಸುರಿಮಳೆ ಸುರಿಸಿದರು. ಡೊಳ್ಳು ಕುಣಿತ, ಹಲಿಗೆ ಮೆರವಣಿಗೆಗೆ ಕಳೆ ನೀಡಿದವು. ನಿವೃತ್ತ ಶಿಕ್ಷಕ ದಂಪತಿ ಕೈ ಮುಗಿದು ನಮಸ್ಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನಂತರ ನಡೆದ ಬಿಳ್ಕೊಡುಗೆ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳು ಅನಂತ ಕುಲಕರ್ಣಿ ಅವರಿಗೆ ಚಿನ್ನದ ಉಂಗುರ ಉಡುಗೊರೆಯಾಗಿ ನೀಡಿದರು.
ಗ್ರಾಮಸ್ಥರು ಹಾಗೂ ಶಿಷ್ಯ ವೃಂದ ತೋರಿದ ಪ್ರೀತಿಗೆ ಹೃದಯ ತುಂಬಿ ಬಂದಿದೆ. ಗ್ರಾಮದಲ್ಲಿ ಸಲ್ಲಿಸಿದ ಸೇವೆಯನ್ನು ಜೀವನದಲ್ಲಿ ಎಂದೂ ಮರೆಯಲಾರೆ ಎಂದು ಅನಂತ ಕುಲಕರ್ಣಿ ತಿಳಿಸಿದರು.
ಕುಲಕರ್ಣಿ ಅವರ ಕುರಿತು ಹರೀಶ್ ಅಲ್ಲೂರಿ ಮಾತನಾಡಿದರು.
ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಶೆರಗಾರ್, ಶಿಕ್ಷಕರಾದ ದೇವೇಂದ್ರ ವಾಲಿಕಾರ್, ಸಜ್ಜನ್, ರಾಜಕುಮಾರ್ ಶಂಭು, ನರಸಿಂಗರಾವ್, ಗಣಪತಿ ಕಾವಳೆ, ರಾಜಕುಮಾರ ಕುಲಕರ್ಣಿ, ಸಿದ್ರಾಮ, ಸುರೇಶ್ ಶಂಭು, ಮಷ್ಣಪ್ಪ ನಾಗಣ್ಣೂರ್, ಶಂಕ್ರಪ್ಪ ಶಂಭು, ಶಿವರಾಜ್ ಕೋಟೆ, ಮಲ್ಲಪ್ಪ ಉಪಕಾರ, ಅಶೋಕ್ ಶಂಭು ಅಮೃತಪ್ಪ ಪಾಪಡೆ, ಮಲ್ಲಿಕಾರ್ಜುನ ಶಂಭು, ಶಂಕರ್, ಶಿವಪುತ್ರ ಶೆರಗಾರ್ ಉಪಸ್ಥಿತರಿದ್ದರು. ಧನರಾಜ್ ವಡಗೈ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!