ಉದಯವಾಹಿನಿ, ಹುಬ್ಬಳ್ಳಿ : ರಾಜ್ಯದ ಹಲವೆಡೆ ಅತೀವೃಷ್ಟಿಯಿಂದಾಗಿ ಹಲವರು ಸಾವನ್ನಪ್ಪಿದ್ದಾರೆ. ಅನೇಕರು ಮನೆ ಕಳೆದುಕೊಂಡಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ತೆರಳಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಿತ್ತು. ಆದರೆ ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಅನಾಹುತದಿಂದ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡ್ಡ ಕುಸಿದು ಏಳಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಸರ್ಕಾರದ ಸಿಎಂ ಹಾಗೂ ಯಾವ ಸಚಿವರು ಅಲ್ಲಿಗೆ ಭೇಟಿ ನೀಡಿಲ್ಲ. ನಾನು ಮೂರು ದಿನಗಳ ಹಿಂದೆಯೇ ಅಲ್ಲಿಗೆ ಭೇಟಿ ಕೊಡಲು ಯೋಜಿಸಿದ್ದೆ. ಆದರೆ ದೆಹಲಿಯಲ್ಲಿ ಇಲಾಖೆಯ ನಿಗದಿತ ಕಾರ್ಯಕ್ರಮದ ನಿಮಿತ್ತ ಬರಲು ಆಗಲಿಲ್ಲ. ಇಂದು ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಮಾಡುತ್ತಿದ್ದೇನೆ. ನಾಳೆ ಸಕಲೇಶಪುರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸುವುದಾಗಿ ತಿಳಿಸಿದರು.

ಮಳೆಯಿಂದಾಗಿ ಹಲವಾರು ಮನೆಗಳನ್ನು ಕಳೆದುಕೊಂಡಿದ್ದಾರೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ಆದರೆ ಕಂದಾಯ ಸಚಿವರು ಜಿಲ್ಲಾ„ಕಾರಿಗಳಿಗೆ ವಿಡಿಯೋ ಕಾನರೆನ್ಸ್ ಮೂಲಕ ಸೂಚನೆ ಕೊಡುತ್ತಿದ್ದಾರೆ. ಏನಾದರೂ ಕೇಳಿದರೆ ಪಿಡಿ ಖಾತೆಯಲ್ಲಿ ಹಣವಿದೆ ಎನ್ನುತ್ತಿದ್ದಾರೆ. ಹಣ ಇಟ್ಟರೆ ಸಾಲದು. ಸ್ಥಳಕ್ಕೆ ತೆರಳಿ ಪರಿಶೀಲಿಸಿ ಜನರಿಗೆ ಧೈರ್ಯ ತುಂಬುವ, ಸಾಂತ್ವನ ಹೇಳುವ ಕಾರ್ಯ ಮಾಡಬೇಕಿತ್ತು. ಇವರ ಈ ನಡೆಯಿಂದ ಸರ್ಕಾರಕ್ಕೆ ಜನರ ಮೇಲಿರುವ ಕಾಳಜಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಕುಟುಕಿದರು. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಏನೇ ಇರಲಿ. ಜನ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿನ ವಸ್ತುಸ್ಥಿತಿ ಪರಿಶೀಲಿಸದಿರುವುದು ದುರ್ದೈವದ ಸಂಗತಿ. ಈ ಸರ್ಕಾರ ಆಡಳಿತ ಹೇಗೆ ನಡೆಸಬೇಕೆಂಬುದು ಮರೆತು ಹೋಗಿದೆ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!