ಉದಯವಾಹಿನಿ, ನರೇಗಲ್: ‘ಪಟ್ಟಣ ಪಂಚಾಯಿತಿ ಅಭಿವೃದ್ಧಿ ಹಿನ್ನಡೆ ಅನುಭವಿಸುತ್ತಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ನೂತನ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಹೇಳಿದರು.
ಪಟ್ಟಣ ಪಂಚಾಯಿತಿಗೆ ಶನಿವಾರ ದಿಢೀರ್ ಭೇಟಿ ನೀಡಿ, ಪಟ್ಟಣ ಪಂಚಾಯಿತಿ ಕಟ್ಟಡ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಕೈಗೊಂಡು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಪಟ್ಟಣ ಪಂಚಾಯಿತಿ ಆದಾಯಕ್ಕೆ ಕತ್ತರಿಯಾಗಿರುವ ವಾಣಿಜ್ಯ ಮಳಿಗೆಗಳನ್ನು ಆದಷ್ಟು ಬೇಗನೇ ಟೆಂಡರ್ ಕರೆಯಲಾಗುತ್ತದೆ. ಒಂದು ವೇಳೆ ಈಗಾಗಲೇ ಆ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ- ವಹಿವಾಟು ಮಾಡುತ್ತಿರುವ ಉದ್ಯೋಗಿಗಳಿಂದ ಬರಬೇಕಾದ ಹಳೆ ಬಾಕಿ ಮೊತ್ತವನ್ನು ಪಾವತಿಸಲು ಅವರು ಹಿಂದೇಟು ಹಾಕಿದ್ದಲ್ಲಿ, ಆ ವ್ಯಾಪಾರಸ್ಥರ ಮನೆಗಳ ಮೇಲೆ ಭೋಜಾ ಹೇರುವಂತೆ ಹಾಗೂ ಕರ ವಸೂಲಿಗೆ ಮುಂದಾಗಬೇಕು’ ಎಂದು ಸೂಚಿಸಿದರು.
‘ಈಗಾಗಲೇ ಸಾರ್ವಜನಿಕರಿಂದ ನರೇಗಲ್ ಪಟ್ಟಣಕ್ಕೆ ಆಂಬುಲೆನ್ಸ್ ಸೇವೆ ಅವಶ್ಯಕತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅವರನ್ನು ಸಂಪರ್ಕಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಒದಗಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ’ ಎಂದರು.ಪಟ್ಟಣ ಪಂಚಾಯಿತಿ ಸದಸ್ಯರು ಕಳೆದೊಂದು ವರ್ಷದಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತೆರವುಗೊಂಡಿರುವ ಕುರಿತು ಪ್ರಶ್ನಿಸಿದರು. ‘ರಾಜ್ಯದ ಬಹುತೇಕ ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವುಗೊಂಡಿದ್ದು, ಸರ್ಕಾರದಿಂದ ಆದಷ್ಟು ಬೇಗನೇ ಮೀಸಲಾತಿ ಪ್ರಕಟಿಸುವ ಬಗ್ಗೆ ಚಿಂತನೆ ನಡೆದಿದೆ. ಸದಸ್ಯರ ಅವಧಿಯು ಇನ್ನೂ ಎರಡೂವರೆ ವರ್ಷ ಇದೆ. ಯಾವುದೇ ಕಾರಣಕ್ಕೂ ಸದಸ್ಯರು ಆತಂಕಕ್ಕೆ ಒಳಗಾಗಬಾರದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
