ಉದಯವಾಹಿನಿ, ಬೆಂಗಳೂರು: ಮಹಿಳಾ ಥೆರಫಿಸ್ಟ್‍ಗೆ ತಾನೊಬ್ಬ ಪೊಲೀಸ್ ಎಂದು ಪರಿಚಯಿಸಿಕೊಂಡು ಹಣ ನೀಡದಿದ್ದರೆ ಅತ್ಯಾಚಾರವೆಸಗುವುದಾಗಿ ಹೆದರಿಸಿ 1.50 ಲಕ್ಷ ರೂ. ಪಡೆದು ಪರಾರಿಯಾಗಿದ್ದ ವಂಚಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರಕುಮಾರ್ (33) ಬಂಧಿತ ನಕಲಿ ಪೊಲೀಸ್. ಈತ ಸುರೇಶ ಎಂಬ ಹೆಸರಿನಲ್ಲಿ ಆನ್ಲೈನ್‍ನಲ್ಲಿ ಥೆರಪಿಗಾಗಿ ಪಶ್ಚಿಮ ಬಂಗಾಳ ಮೂಲದ 25 ವರ್ಷದ ಮಹಿಳಾ ಥೆರಫಿಸ್ಟಗೆ ಬುಕ್ ಮಾಡಿದ್ದನು.
ಥೆರಪಿಗಾಗಿ ರಾಮಮೂರ್ತಿ ನಗರದ ಅಪಾರ್ಟ್‍ಮೆಂಟ್ ಬಳಿ ರಾತ್ರಿ 10.30 ರ ಸುಮಾರಿನಲ್ಲಿ ಬಂದಿದ್ದಾಗ ಕಾರಿನಲ್ಲಿ ಆರೋಪಿ ಸ್ವಲ್ಪ ದೂರ ಕರೆದೊಯ್ದು ಬ್ಲಾಕ್‍ಮೇಲ್ ಮಾಡಿದ್ದಾರೆ. ತಾನೊಬ್ಬ ಪೊಲೀಸ್, 10 ಲಕ್ಷ ನೀಡದಿದ್ದರೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಆತನ ವರ್ತನೆಯಿಂದ ಭಯಗೊಂಡ ಮಹಿಳಾ ಥೆರಪಿಸ್ಟ್ ಸ್ನೇಹಿತರಿಗೆ ಕರೆ ಮಾಡಿ 1.50 ಲಕ್ಷ ರೂ.ವನ್ನು ಆರೋಪಿಗೆ ವರ್ಗಾವಣೆ ಮಾಡಿಸಿದ್ದಾರೆ.
ತದನಂತರ ರಾತ್ರಿಯಿಡೀ ಹೆಬ್ಬಾಳ ಸೇರಿದಂತೆ ಹಲವೆಡೆ ಕಾರಿನಲ್ಲಿ ಸುತ್ತಾಡಿಸಿ ಬೆಳಗಿನ ಜಾವ ಏರ್‍ಫೋರ್ಟ್ ಬಳಿ ಮಹಿಳಾ ಥೆರಫಿಸ್ಟ್‍ಗೆ ಇಳಿಸಿ ನೀನು ಊರಿಗೆ ಹಿಂದಿರುಗಬೇಕು, ಇಲ್ಲದಿದ್ದರೆ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ. ವಂಚಕನ ಮಾತಿಗೆ ಹೆದರದೆ ಮಹಿಳಾ ಥೆರಫಿಸ್ಟ್ ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಕೈಗೊಂಡು ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ವಂಚಕ ಮಹೇಂದ್ರನನ್ನು ಬಂಧಿಸಿದ್ದಾರೆ.ಆರೋಪಿ ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಈ ರೀತಿ ಹಣ ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದುದು ವಿಚಾರಣೆಯಿಂದ ಗೊತ್ತಾಗಿದೆ. ಈ ವಂಚಕ ಈ ಹಿಂದೆಯೂ ಇದೇ ರೀತಿ ಕೃತ್ಯವೆಸಗಿದ್ದು, ಈತನ ವಿರುದ್ಧ ಮಾರತಳ್ಳಿ, ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!