ಉದಯವಾಹಿನಿ, ಹೊಸಕೋಟೆ: ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ‌ ಆರು ತಿಂಗಳು‌ ಕಳೆದಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ.ಚೆನ್ನೈ-ಬೆಂಗಳೂರು ರೈಲು ಮಾರ್ಗ ಕೊರಳೂರು ಬಳಿ ಹಾದು ಹೋಗುತ್ತದೆ. ಇದೇ ಟ್ರ್ಯಾಕ್‌ಗೆ ಅಡ್ಡಲಾಗಿ 207 ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ.
ಈ ರಸ್ತೆ ತಾಲ್ಲೂಕಿನ ಹಲವು ಗ್ರಾಮಗಳ ಸಂಪರ್ಕ ಕೊಂಡಿ. ತಮಿಳುನಾಡಿನ ಹೊಸೂರು ಮತ್ತು ಡಾಬಸ್‌ಪೇಟೆಗೆ ಸಂಪರ್ಕ ಕಲ್ಪಿಸುತ್ತದೆ.
ಈ ರೈಲು ಮಾರ್ಗದಲ್ಲಿ ಈ ರೈಲು ಮಾರ್ಗದಲ್ಲಿ ದಿನಕ್ಕೆ 170 ರೈಲುಗಳ ಸಂಚರಿಸುತ್ತವೆ. ಕೊರಳೂರು ರೈಲ್ವೆ ಗೇಟ್‌ ಅನ್ನು ದಿನಕ್ಕೆ 170 ಬಾರಿ ಮುಚ್ಚಿ, ‌ ತೆಗೆಯಲಾಗುತ್ತದೆ. ಇದರಿಂದ ವಾಹನ ಸವಾರರು ಕಾದು ಕಾದು ಸುಸ್ತಾಗುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬುದು ಸ್ಥಳೀಯರ ದಶಕಗಳ ಬೇಡಿಕೆಯಾಗಿತ್ತು.ಇದಕ್ಕೆ ಸ್ಪಂದಿಸಿ ಹಾಗೂ ಸಮಸ್ಯೆ ಅರಿತ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ₹100 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿತು.
ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಿಂದ ₹43 ಕೋಟಿ, ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ₹36 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ₹18 ಕೋಟಿಯನ್ನು ಕಾಮಗಾರಿ ಹೊಂದಿಸಲಾಗಿತ್ತು. ಆರು ತಿಂಗಳ ಹಿಂದೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಶಾಸಕ ಶರತ್ ಬಚ್ಚೇಗೌಡ ಭೂಮಿ‌ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಅಲ್ಲಿ ಒಂದು ಕೆಲಸವೂ ಆಗಿಲ್ಲ. ಇದರಿಂದ ಸವಾರರು ಹೈರಾಣಾಗುತ್ತಿದ್ದಾರೆ. ಹೊಸೂರು, ಚಿಕ್ಕತಿರುಪತಿ, ಆನೇಕಲ್ ಸೇರಿದಂತೆ ಹಲವು ಕಡೆಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಇಲ್ಲಿ ಕ್ಷಣ ಕ್ಷಣಕ್ಕೂ ರೈಲು ಸಂಚಾರ ಇರುವುದದರಿಂದ ಆಗ್ಗಾಗೆ ರೈಲು ಗೇಟ್‌ ಮುಚ್ಚುತ್ತದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!