ಉದಯವಾಹಿನಿ, ಬೆಂಗಳೂರು: ಮೈಸೂರು ನಗರಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯ ಬಳಿಕ ಮುಡಾ ಅಕ್ರಮ ಪ್ರಕರಣ ಯಾವ ಹಂತಕ್ಕೆ ಬರಲಿದೆ ಎಂದು ನೋಡಿಕೊಂಡು ಪಾದಯಾತ್ರೆ ನಡೆಸಲು ಬಿಜೆಪಿ ರಾಜ್ಯ ನಾಯಕರು ತೀರ್ಮಾನಿಸಿದ್ದು, ಒಂದು ವೇಳೆ ಸಿಎಂ ರಾಜೀನಾಮೆ ಕೊಡದಿದ್ದರೆ ಪಾದಯಾತ್ರೆ ಮೂಲಕ ಮೈಸೂರಿಗೆ ತೆರಳಿ ಸಿಎಂ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.
ಅಧಿವೇಶನ ಬಳಿಕ ಜು. 29ರಂದು 120 ಕಿ.ಮೀ. ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಸುನೀಲ್ ಕುಮಾರ್ ಸೇರಿ ವಿವಿಧ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಇನ್ನು ಪಾದಯಾತ್ರೆ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗದೆ, ಚನ್ನಪಟ್ಟಣ, ಮಂಡ್ಯ ಒಳರಸ್ತೆಯಲ್ಲಿ ಪಾದಯಾತ್ರೆ ಮೂಲಕ ತೆರಳಿ ಜನರ ಗಮನ ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂ. ಬೆಲೆಬಾಳುವ 14 ನಿವೇಶನಗಳನ್ನು ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಅರ್ಹತೆ ಪ್ರಕಾರ ಪಾರ್ವತಿ ಅವರಿಗೆ ನೀಡಬೇಕಾಗಿದ್ದು ಕೇವಲ ಎರಡು ಜಮೀನು ಮಾತ್ರ. ಆದರೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಗಂಭೀರ ಆರೋಪ ಮಾಡುತ್ತಿದೆ. ಈ ಆರೋಪಕ್ಕೆ ಸಿದ್ದರಾಮಯ್ಯ, ನಿಯಮದ ಪ್ರಕಾರವೇ ಎಲ್ಲರಿಗೂ ಹಂಚಿಕೆಯಾಗುವಂತೆ ಮುಡಾದಿಂದ ಸೈಟ್ ಹಂಚಿಕೆಯಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಅಲ್ಲೇ ನಿವೇಶನ ನೀಡಬೇಕೆಂದು ಕೇಳಿಕೊಂಡಿಲ್ಲ. ಮುಡಾದವರು ಹಂಚಿಕೆ ಮಾಡಿದ್ದಾರೆ. ಯಾವುದೇ ಅಕ್ರಮ ನಡೆಸಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!