ಉದಯವಾಹಿನಿ, ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾದ ನಿವೇಶನ ಅಕ್ರಮದಲ್ಲಿ ನನ್ನ ಪಾತ್ರವೇ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಪರಿಷತ್‌ನಲ್ಲಿ ಘಂಟಾಘೋಷವಾಗಿ ಹೇಳಿದ್ದಾರೆ. ಮುಡಾ ಅಕ್ರಮದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯನವರು, ಪ್ರತಿಪಕ್ಷದ ಸದಸ್ಯರು ಎತ್ತಿರುವ ವಿಷಯದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಪುನರುಚ್ಚರಿಸಿದರು.ನಾವು ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡುವಂತೆ ಮುಡಾದವರಿಗೆ ಅರ್ಜಿ ಕೊಟ್ಟಿದ್ದೆವು. ಶೇ. 50-50ರ ಅನುಪಾತದಲ್ಲಿ ಕಾನೂನಿನಡಿಯೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ನಿಯಮಾನುಸುರವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ತಪ್ಪಿನ ಪ್ರಶ್ನೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.
ಮುಡಾದವರು ನಿಯಮಾನುಸಾರ ನಿವೇಶನ ಹಂಚಿಕೆ ಮಾಡುತ್ತಾರೆ. 38 ಚದರ ಅಡಿಯಲ್ಲಿ ಸ್ವತಃ ನಮದೇ ಭೂಮಿ ಹೋಗಿದೆ. ನಾನು 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಅಕ್ರಮ ನಡೆದಿಲ್ಲ ಎಂದು ಹೇಳಿದ್ದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಇಂತಹ ಕಡೆಯೇ ನಿರ್ಧಿಷ್ಟ ಸ್ಥಳದಲ್ಲಿ ನಿವೇಶನ ಕೊಡಿ ಎಂದು ಕೇಳಿದ್ದರೆ ಅದು ನಿಯಮ ಬಾಹಿರವಾಗುತ್ತಿತ್ತು. ಮುಡಾದವರೇ ನಿವೇಶನ ಹಂಚಿಕೆ ಮಾಡಿರುವಾಗ ನಾವೇನು ಮಧ್ಯಪ್ರವೇಶ ಮಾಡಿದ್ದೇವಾ? ಎಂದು ಪ್ರತಿಪಕ್ಷದ ಸದಸ್ಯರದ ವಿರುದ್ಧ ಹರಿಹಾಯ್ದರು.
