ಉದಯವಾಹಿನಿ, ಬೀಜಿಂಗ್‌: ಚೀನಾದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಭಾರೀ ಬಿರುಕು ಮೂಡಿದ್ದು, ಸುಮಾರು 40 ಬ್ಯಾಂಕ್‌ಗಳು ಮುಳುಗುವ ಸ್ಥಿತಿಗೆ ತಲುಪಿವೆ.ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡಿಕೆ ಹಾಗೂ ಇತರೆ ಕಾರಣದಿಂದಾಗಿ ದೇಶದಲ್ಲಿ 3800 ಬ್ಯಾಂಕ್‌ಗಳು ಸಮಸ್ಯೆಯ ಸುಳಿಗೆ ಸಿಲುಕಿವೆ ಎಂದು ವರದಿಯಾಗಿದೆ.ಡ್ರಾಗನ್‌ ರಾಷ್ಟ್ರದಲ್ಲಿ ಬ್ಯಾಂಕ್‌ಗಳ ದಿವಾಳಿತನ ಮುಂದುವರೆದಿದ್ದು, ವಿಶ್ವ ವ್ಯಾಪಿ ಇದು ಭಾರೀ ಸಂಚಲನ ಮೂಡಿಸಿದೆ. ಚೀನಾದ ಜಿಯಾಂಗ್ಸಿ ಬ್ಯಾಂಕ್‌ ದಿವಾಳಿ ಎದಿದ್ದು, ಠೇವಣಿದಾರರು ಹಣ ವಾಪಸ್ಸಿಗೆ ಬ್ಯಾಂಕ್‌ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಮಸ್ಯೆಗೆ ಸಿಲುಕಿರುವ 3800 ಹಣಕಾಸು ಸಂಸ್ಥೆಗಳು ಒಟ್ಟಾರೆ 7.5 ಲಕ್ಷ ಕೋಟಿ ಡಾಲರ್‌ಗಳಷ್ಟು ಆಸ್ತಿ ಹೊಂದಿವೆ. ಇವು ದೇಶದ ಒಟ್ಟಾರೆ ಬ್ಯಾಂಕ್‌ ವಲಯದ ಆಸ್ತಿಯ ಶೇ.13ರಷ್ಟಿದೆ. ಈ ಬ್ಯಾಂಕ್‌ಗಳಿಂದ ನೀಡಲಾದ ಸಾಲಗಳ ಪೈಕಿ ಶೇ.40ರಷ್ಟು ವಸೂಲಾಗದಿರುವುದೇ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.
2023ರ ಅಂತ್ಯದ ವೇಳೆಗೆ 27 ಸ್ಥಳೀಯ ಬ್ಯಾಂಕ್‌ಗಳ ಕುರಿತ ಸಂಶೋಧನೆ ಆಧರಿಸಿ ಹೇಳುವುದಾದರೆ 2022ಕ್ಕೆ ಹೋಲಿಸಿದ್ದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಸಾಲ ನೀಡಿಕೆ ಶೇ.30ರಷ್ಟು ಹೆಚ್ಚಾಗಿದೆ ಎಂದು ದಿ ಲಿಬರ್ಟಿ ಟೈಮ್ಸೌ ತಿಳಿಸಿದೆ. 2021ರಲ್ಲಿ ಎವರ್‌ ಗ್ರಾಂಡೆ, ಕಂಟ್ರಿ ಗಾರ್ಡನ್‌, ಸಿನೊ ಓಷನ್‌ ಗ್ರೂಪ್‌, ಎಸ್‌‍ಒಎಚ್‌ಒ ಚೀನಾದಂತಹ ರಿಯಲ್‌ ಎಸ್ಟೇಟ್‌ ಕಂಪನಿಗಳು ಪತನ ಹೊಂದಿದ ಬಳಿಕ ಚೀನಿ ಬ್ಯಾಂಕ್‌ಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಸರ್ಕಾರ ವಿಧಿಸಿರುವ ಕಠಿಣ ಕರೆನ್ಸಿ ನಿಯಂತ್ರಣದಿಂದಾಗಿ ಚೀನಾದ ಬ್ಯಾಂಕ್‌ ಬಿಕ್ಕಟ್ಟಿನಿಂದ ಹೊರಬಂದು ಲಾಭ ಗಳಿಸುವುದು ಅಸಾಧ್ಯದ ಮಾತಾಗಿದೆ ಎಂದು ತೈವಾನ್‌ನ ನಿಧಿ ಹೂಡಿಕೆದಾರರೊಬ್ಬರು ಏಷ್ಯ ಸೆಂಟಿನಲ್‌ಗೆ ತಿಳಿಸಿದ್ದಾರೆ. ಸುಮಾರು 3 ಸಾವಿರ ಚೀನಿ ಬ್ಯಾಂಕ್‌ಗಳು ತಾಂತ್ರಿಕವಾಗಿ ದಿವಾಳಿ ಎದ್ದಿವೆ ಎಂದು ಲಿಬರ್ಟಿ ಟೈಮ್ಸೌ ವರದಿ ಮಾಡಿದೆ.
ಈ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಸಣ್ಣ ಬ್ಯಾಂಕ್‌ಗಳು ಉಳಿತಾಯ ಮತ್ತು ಸಾಲ ನೀಡಿಕೆಯಲ್ಲಿ ತೊಂದರೆಯನ್ನು ಎದುರಿಸುತ್ತಿವೆ. 2019ರ ಈಚೆಗೆ ಕೆಲವು ಚೀನಿ ಬ್ಯಾಂಕ್‌ಗಳು ಮುಳುಗಿ ಹೋಗಿದ್ದು, ಸಣ್ಣ ಕೃಷಿ ಬ್ಯಾಂಕ್‌ಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಿಯಲ್‌ ಎಸ್ಟೇಟ್‌ ಬಿಕ್ಕಟ್ಟನ್ನು ಎದುರಿಸಲು ಚೀನಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ವಸತಿ ಮಾರುಕಟ್ಟೆ ಆರಂಭಿಸಲು ಚಿಂತನೆ ನಡೆಸಿದೆ.

Leave a Reply

Your email address will not be published. Required fields are marked *

error: Content is protected !!