ಉದಯವಾಹಿನಿ, ಚಿಂತಾಮಣಿ: ಸರ್ಕಾರ ತಾಲ್ಲೂಕನ್ನು ಕಳೆದ ವರ್ಷ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿತ್ತು. ಈ ವರ್ಷವೂ ಸಮರ್ಪಕವಾಗಿ ಮಳೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲೂ ತಾಲ್ಲೂಕಿನಲ್ಲಿ ಹಾಲಿನ ಸಮೃದ್ಧಿ ಕಂಡುಬಂದಿದೆ. ಸರಾಸರಿ ದಿನನಿತ್ಯ 1.32 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ.ಹಾಲು ಉತ್ಪಾದನೆಯಲ್ಲಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ.
ಕಳೆದ ವರ್ಷ ಬರ ಆವರಿಸಿದರೂ ಹೈನೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಖಾಸಗಿ ಸಂಸ್ಥೆಗಳ ಪೈಪೋಟಿ ನಡುವೆಯೂ ಪ್ರಸಕ್ತ ಸಾಲಿನಲ್ಲಿ ಹಾಲಿನ ಉತ್ಪಾದನೆ ಅಧಿಕಗೊಂಡಿದೆ. ಕಳೆದ ವರ್ಷ ಈ ತಿಂಗಳಲ್ಲಿ ಒಂದು ಲಕ್ಷ ಲೀಟರ್ ಉತ್ಪಾದನೆ ಆಗುತ್ತಿತ್ತು.

ಕೋಚಿಮುಲ್ ಮಾಹಿತಿಯ ಪ್ರಕಾರ ತಾಲ್ಲೂಕಿನಲ್ಲಿ 235 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅದರಲ್ಲಿ 22 ಮಹಿಳಾ ಸಂಘಗಳಿವೆ.
ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 1.32 ಲಕ್ಷ ಲೀಟರ್ ಹಾಲಿನ ಸಂಗ್ರಹಣೆ ಆಗುತ್ತಿದೆ. ಒಕ್ಕೂಟವು ಹೈನೋದ್ಯಮಕ್ಕೆ ನೀಡಿದ ಉತ್ತೇಜನ ಮತ್ತು ವಿವಿಧ ರೀತಿಯ ಪ್ರೋತ್ಸಾಹ, ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಯಿಂದ ಬರಪೀಡಿತ ತಾಲ್ಲೂಕಿನಲ್ಲೂ ಹಾಲಿನ ಹೊಳೆ ಹರಿಯುತ್ತಿದೆ. ಅವಿಭಜಿತ ಕೋಲಾರ ಜಿಲ್ಲೆ ‘ಸಿಲ್ಕ್, ಮಿಲ್ಕ್, ಗೋಲ್ಡ್’ ಎಂದು ಪ್ರಸಿದ್ಧಿಯಾಗಿತ್ತು. ಕೆಜಿಎಫ್ ಚಿನ್ನದ ಗಣಿ ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಬೆಲೆ ಕುಸಿತ ಮತ್ತು ವಿವಿಧ ರೋಗಗಳಿಂದ ರೇಷ್ಮೆ ಉದ್ಯಮವೂ ಕುಸಿದಿದೆ. ಬಹುತೇಕ ರೇಷ್ಮೆ ಬೆಳೆಗಾರರು ತರಕಾರಿ ಬೆಳೆ ಕಡೆ ಆಸಕ್ತಿ ತೋರುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!