ಉದಯವಾಹಿನಿ, ಬೆಂಗಳೂರು: ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ನಿರಂತರ ಮಳೆಯಿಂದ ಅನೇಕ ಕಡೆ ಮರಗಳು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ.ವಿದ್ಯುತ್ ಕಂಬಗಳು ಮುರಿದು ಬಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಲಾಶಯಗಳು ಭರ್ತಿಯಾಗಿ ಭಾರಿ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ನದಿಪಾತ್ರದ ಹಲವು ಗ್ರಾಮಗಳು ಜಲಾವೃತಗೊಂಡಿವೆ.
ಮಂಡ್ಯದಲ್ಲಿ ಕಾವೇರಿಯ ಅಬ್ಬರ ಹೆಚ್ಚಾಗಿದೆ. ಕೆಆರ್‌ಎಸ್‌ನಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ನದಿಪಾತ್ರದಲ್ಲಿರುವ ಧಾರ್ಮಿಕ ಕ್ಷೇತ್ರಗಳು ಮುಳುಗಡೆಯಾಗಿವೆ.
ನಿಮಿಷಾಂಬ ದೇಗುಲದ ಸ್ನಾನಘಟ್ಟ ಸಂಪೂರ್ಣ ಜಲಾವೃತವಾಗಿದೆ. ಕಾವೇರಿ ನದಿ ಬಳಿ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ನದಿಗೆ ತೆರಳದಂತೆ ಸೂಚನೆ ನೀಡಲಾಗಿದೆ.ರಂಗನತಿಟ್ಟು ಪಕ್ಷಿಧಾಮ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಾವೇರಿಯ ಬೋರ್ಗರೆತಕ್ಕೆ ಪಕ್ಷಿ ಸಂಕುಲನ ನಲುಗಿ ಹೋಗಿದೆ. ಬೋಟಿಂಗ್ ಪಾಯಿಂಟ್ ಅನ್ನು ಸ್ಥಗಿತಗೊಳಿಸಲಾಗಿದೆ.ಉತ್ತರ ಕರ್ನಾಟಕದ ಬೆಳಗಾವಿಯಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ಬೆಳಗಾವಿ, ಹಾವೇರಿ, ಯಾದಗಿರಿ ಜಿಲ್ಲೆಗಳಲ್ಲೂ ಮಳೆಯ ರೌದ್ರನರ್ತನ ಮುಂದುವರೆದಿದೆ. ಭಾರಿ ಪ್ರಮಾಣದಲ್ಲಿ ಜಲಾಶಯಗಳಿಂದ ನೀರನ್ನು ಹೊರಬಿಡುತ್ತಿರುವುದರಿಂದ ನದಿಪಾತ್ರದ ಹಲವು ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ, ಖಾನಾಪುರ ಮುಂತಾದೆಡೆ ಮಳೆ ಧಾರಕಾರವಾಗಿ ಸುರಿಯುತ್ತಿರುವುದರ ಜೊತೆಗೆ ಮಹಾರಾಷ್ಟ್ರದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹೊಲ-ಗದ್ದೆಗಳು ಜಲಾವೃತಗೊಂಡು ಪ್ರವಾಹದ ಭೀತಿ ಎದುರಾಗಿದೆ.
