ಉದಯವಾಹಿನಿ, ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ‘ಬಲಮುರಿ’ ಮತ್ತು ಮಳವಳ್ಳಿ ತಾಲ್ಲೂಕಿನ ‘ಮುತ್ತತ್ತಿ’ ಪ್ರವಾಸಿ ತಾಣಗಳು ‘ಸಾವಿನ ವಲಯ’ಗಳಾಗಿ ಅಪಾಯದ ಕರೆಗಂಟೆ ಬಾರಿಸುತ್ತಿವೆ.
ಈ ಎರಡೂ ತಾಣಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಕಳೆದ ಆರು ವರ್ಷಗಳಲ್ಲಿ ಬಲಮುರಿಯಲ್ಲಿ 32 ಮಂದಿ ಮತ್ತು ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ 30 ಮಂದಿ ಅಸುನೀಗಿದ್ದಾರೆ.
ಹಚ್ಚ ಹಸಿರಿನ ಪ್ರಕೃತಿ ಮಡಿಲಿನಲ್ಲಿರುವ ಬಲಮುರಿ ಮತ್ತು ಮುತ್ತತ್ತಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇಲ್ಲಿ ಜುಳುಜುಳು ಹರಿಯುವ ಕಾವೇರಿ ನದಿಯಲ್ಲಿ ಮಿಂದೇಳಲು ಜನರು ಮುಗಿಬೀಳುತ್ತಾರೆ. ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಮೋಜು, ಮಸ್ತಿ ಮಾಡಲು ಬರುವ ಯುವಕರು ಸುರಕ್ಷತೆಯನ್ನು ಮರೆತು ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ.

ಬಲಮುರಿಯ ಲಾಳಾಕಾರದ ಒಡ್ಡಿನ ಮೇಲೆ ಓಡಾಡುವಾಗ, ಕುಳಿತು ಮೋಜು ಮಾಡುವಾಗ, ಮದ್ಯದ ಅಮಲಿನಲ್ಲಿ ತೇಲಾಡುವಾಗ ಆಯತಪ್ಪಿ ಬಿದ್ದು, ನದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗುತ್ತಿದ್ದಾರೆ. ಒಡ್ಡಿನ ಮೇಲಿಂದ ಹಿನ್ನೀರಿಗೆ ಧುಮುಕುವುದು, ಈಜಾಡುವ ವೇಳೆ ನದಿಯ ಒಳಭಾಗದಲ್ಲಿರುವ ಕಲ್ಲು, ಬಂಡೆಗಳಿಗೆ ತಲೆ ಬಡಿದು ಕೆಲವರು ಜೀವತೆತ್ತಿದ್ದಾರೆ. ಇನ್ನು ಕೆಲವರು ಈಜು ಬಾರದೇ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.83 ಪ್ರವಾಸಿಗರು ನೀರುಪಾಲು: ಬಲಮುರಿಯ ಕಾವೇರಿ ನದಿ ನೀರಿನಲ್ಲಿ 2008ರಿಂದ 2017ರವರೆಗೆ ಅಂದರೆ 10 ವರ್ಷಗಳಲ್ಲಿ ಬರೋಬ್ಬರಿ 83 ಪ್ರವಾಸಿಗರು ನೀರುಪಾಲಾಗಿದ್ದಾರೆ. ಇವರಲ್ಲಿ 16 ರಿಂದ 28 ವರ್ಷದೊಳಗಿನ ಯುವಕರೇ ಹೆಚ್ಚು. ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳು, ಟೆಕ್ಕಿಗಳು ಜೀವ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!