ಉದಯವಾಹಿನಿ, ಬೆಂಗಳೂರು: ಬೆಂಗಳೂರು ಮಹಾನಗರದ ಸಮಸ್ಯೆಗಳು ಹಾಗೂ ಅದರ ಪರಿಹಾರಗಳ ಬಗ್ಗೆ ಪಕ್ಷಬೇಧ ಮರೆತು ಎಲ್ಲಾ ಜನಪ್ರತಿನಿಧಿಗಳು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದ ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಚಿವರಾದ ಜಮೀರ್ ಅಹಮದ್ಖಾನ್, ಬಿಜೆಪಿಯ ಶಾಸಕರಾದ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಗೋಪಾಲಯ್ಯ, ಭೈರತಿ ಬಸವರಾಜು, ಮುನಿರತ್ನ, ರಾಮಮೂರ್ತಿ, ರವಿ ಸುಬ್ರಹಣ್ಯ, ದಾಸರಹಳ್ಳಿಯ ಮುನಿರಾಜು, ಕಾಂಗ್ರೆಸ್ನ ಬಿಡಿಎ ಅಧ್ಯಕ್ಷರೂ ಆಗಿರುವ ಎನ್.ಎ.ಹ್ಯಾರಿಸ್, ಆನೇಕಲ್ ಕ್ಷೇತ್ರದ ಶಿವಣ್ಣ, ಎ.ಸಿ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಸುಧಾಂದಾಸ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ವಿರೋಧಪಕ್ಷಗಳ ಶಾಸಕರಲ್ಲಿ ಅಸಮಾಧಾನಗಳಿವೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಬೆಂಗಳೂರಿನ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬೆಂಗಳೂರಿನ ಶಾಸಕರ ಸಭೆ ಕರೆಯುವುದಾಗಿ ವಿಧಾನಸಭೆಯಲ್ಲಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಅದರಂತೆ ಇಂದು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಕ್ಷಭೇದ ಮರೆತು ಎಲ್ಲರೂ ಪರಸ್ಪರ ಆತೀಯತೆಯಿಂದ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಆರ್.ಅಶೋಕ್, ಡಿ.ಕೆ.ಶಿವಕುಮಾರ್ ಅಕ್ಕಪಕ್ಕ ಕುಳಿತು ಬೆಂಗಳೂರು ಮಹಾನಗರದ ಅಭಿವೃದ್ಧಿಯ ಕುರಿತು ಸಮಾಲೋಚನೆ ನಡೆಸಿದರು. ಬ್ರ್ಯಾಂಡ್ ಬೆಂಗಳೂರು ಎಂಬುದು ಕೇವಲ ಹೆಸರಿಗೆ ಸೀಮಿತ ಆಗಬಾರದು. ಈ ಹಿಂದೆ ಬಿಬಿಎಂಪಿಯನ್ನು ರಚನೆ ಮಾಡಿ ವಾರ್ಡ್ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಿದಾಗಲೇ ಬಿಜೆಪಿ ವಿರೋಧ ಮಾಡಿತ್ತು. ಈಗಲೂ ಹೊರವಲಯದ ಬೆಂಗಳೂರು ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಸೊರಗುತ್ತಿದೆ.  ಗ್ರೇಟರ್ ಬೆಂಗಳೂರು ರಚನೆ ಮಾಡುವುದು ಅನಗತ್ಯ ಎಂದು ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಬಸವರಾಜು ಬೊಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಈಗ ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಹಣ ನೀಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.

Leave a Reply

Your email address will not be published. Required fields are marked *

error: Content is protected !!