ಉದಯವಾಹಿನಿ, ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಬಂಡವಾಳ ಹಿಂತೆಗೆತ ಎಂಬ ನಿರ್ಧಾರವನ್ನು ಹಿಂಪಡೆದು ಮರು ಹೂಡಿಕೆ ಎಂಬ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಹಳಷ್ಟು ಕಂಪನಿಗಳು ಮುಚ್ಚಿ ಹೋಗಿವೆ. ಎಚ್‌ಎಂಟಿ ಒಂದು ಕಾಲದಲ್ಲಿ ಕೈಗಡಿಯಾರದ ಮಾರುಕಟ್ಟೆಯ ಶೇ.90 ರಷ್ಟು ಪಾಲು ಹೊಂದಿತ್ತು. 1975 ರಲ್ಲಿ 279 ಕೋಟಿ ರೂ. ಲಾಭ ಗಳಿಸಿತ್ತು. ಇಂದು ಅದರ ಮಾರುಕಟ್ಟೆ ಮೌಲ್ಯ 27 ಸಾವಿರ ಕೋಟಿಯಷ್ಟಾಗಬಹುದು. ಅಷ್ಟು ವೈಭವವಾಗಿ ನಡೆಯುತ್ತಿದ್ದ ಕಾರ್ಖಾನೆಯನ್ನು ಇಂದು ಅಧೋಗತಿಗೆ ತಂದಿಟ್ಟವರ್ಯಾರು ಎಂದು ಪ್ರಶ್ನಿಸಿದರು. 1983-84 ರಲ್ಲಿ ಎಚ್‌ಎಂಟಿಯಲ್ಲಿದ್ದ 350 ತಜ್ಞ ಎಂಜಿನಿಯರ್‌ಗಳನ್ನು ಟೈಟಾನ್ ಮತ್ತು ಟಾಟಾ ಕಂಪನಿಯವರು ಒಂದೇ ರಾತ್ರಿ ಕರೆದುಕೊಂಡು ಹೋದರು. ಕಾರ್ಖಾನೆ ಇಂದು ಮುಚ್ಚುವ ಸ್ಥಿತಿಗೆ ಬಂದಿದೆ. ನಾನು ಒಂದು ಘಟಕಕ್ಕೆ ಭೇಟಿ ನೀಡಿದ ತಕ್ಷಣ 47 ರೂ. ಇದ್ದ ಷೇರು ಮೌಲ್ಯ 92 ರೂ.ಗೆ ಹೆಚ್ಚಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮತ್ತೆ ಪುನಶ್ಚೇತನಗೊಳಿಸಬೇಕಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ವಾಣಿಜ್ಯ, ಹಣಕಾಸು ಹಾಗೂ ಇತರ ಇಲಾಖೆಗಳ ಮನವೊಲಿಕೆ ಮಾಡಿ ಬಂಡವಾಳ ಹಿಂತೆಗೆತ ಎಂಬ ನಿರ್ಧಾರವನ್ನು ಬದಲಾವಣೆ ಮಾಡಿ ಬಂಡವಾಳ ಮರು ಹೂಡಿಕೆ ಎಂಬ ತೀರ್ಮಾನ ಮಾಡಬೇಕಿದೆ. ನನಗೆ ಆರು ತಿಂಗಳ ಕಾಲ ಸಮಯಾವಕಾಶ ಕೊಡಿ. ನಷ್ಟದಲ್ಲಿರುವ ಒಂದು ಉದ್ದಿಮೆಯನ್ನು ಲಾಭದಾಯಕವನ್ನಾಗಿ ಮಾಡಿ ಕೇಂದ್ರದ ಪ್ರಮುಖರ ಮನವೊಲಿಸಿ ಮರಳಿ ಮರುಹೂಡಿಕೆಯ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.ರಾಜ್ಯದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ 15 ಸಾವಿರ ಜನ ಕೆಲಸ ಮಾಡುತ್ತಿದ್ದರು. ಅದು ತುಕ್ಕು ಹಿಡಿದಿದೆ. ಅದೇ ರೀತಿ ಹಲವು ಉದ್ದಿಮೆಗಳು ಮುಚ್ಚಿ ಹೋಗಿವೆ. ಇವುಗಳ ಪುನಶ್ಚೇತನಕ್ಕೆ ದಿನಕ್ಕೆ 15 ಸಭೆ ನಡೆಸುತ್ತಿದ್ದೇನೆ ಎಂದು ಹೇಳಿದರು.
