ಉದಯವಾಹಿನಿ, ಮೈಸೂರು: ಶೀಘ್ರವಾಗಿಯೇ ತಮಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ದೇವರು ಕೊಡಲಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಾಯಕರು ಅವರಪ್ಪರಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಅದೇ ಅವಧಿಯಲ್ಲೇ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಿತು ಎಂದು ಹೇಳಿದರು.ಈಗ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ರಾಮನಗರದ ಹೆಸರು ಬದಲಾವಣೆ ಮಾಡುವ ಅವಕಾಶ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿದ್ದಾರೆ. ಅವರು ಯಾವ ರೀತಿ ಪದಗಳನ್ನು ಬಳಕೆ ಮಾಡುತ್ತಾರೋ, ಆದಷ್ಟು ಬೇಗ ಅವು ಜಾರಿಗೆ ಬರುತ್ತವೆ. ತಮಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಶೀಘ್ರ ಬರಲಿದೆ ಎಂದಿದ್ದಾರೆ.ತಮಗೆ ಜನರ ಮತ್ತು ದೇವರ ಆಶೀರ್ವಾದ ಸಾಕು. ಡಿ.ಕೆ.ಶಿವಕುಮಾರ್ ಹಾಗೂ ಇತರರ ಆಶೀರ್ವಾದ ಬೇಡ ಎಂದು ಹೇಳಿದರು.
ಅನಂತರ ಮೈಸೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರದ ನಡವಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಕುಮಾರಸ್ವಾಮಿಯವರು ಉದ್ಯೋಗ ಅವಕಾಶ, ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ಯಾವುದೋ ಒಂದು ರಾಜ್ಯಕ್ಕೆ ಸೀಮಿತವಲ್ಲ. ಕರ್ನಾಟಕಕ್ಕೂ ಲಾಭವಾಗಲಿದೆ ಎಂದರು. ಕೌಶಲ್ಯಾಭಿವೃದ್ಧಿಗೆ 2015 ರಲ್ಲಿ 1.50 ಲಕ್ಷ ಕೋಟಿ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 7.50 ಲಕ್ಷ ಕೋಟಿ ನೀಡಲಾಗಿದೆ. ಕಳೆದ 8 ವರ್ಷಗಳಲ್ಲಿ ಅದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಸುಮಾರು 11,000 ಖಾಸಗಿ ಕಂಪನಿಗಳು ಉಪಯೋಗ ಮಾಡಿಕೊಂಡಿವೆ. ಆ ಕಂಪನಿಗಳ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ 2 ಲಕ್ಷ ಕೋಟಿ ನೀಡಲಾಗಿದೆ. ಕೃಷಿ ಹಾಗೂ ಅದರ ಚಟುವಟಿಕೆಗಳಿಗೆ 1.50 ಲಕ್ಷ ಕೋಟಿ ಒದಗಿಸಲಾಗಿದೆ.ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ಇದು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
