
ಉದಯವಾಹಿನಿ, ಬೆಂಗಳೂರು : ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಕೆ ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಮುಳುಗಿದ ಕಾರಿನಲ್ಲಿ ಹರಸಾಹಸ ಪಟ್ಟು ಆರು ಮಂದಿಯನ್ನು ರಕ್ಷಿಸಲಾಗಿದೆ. ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ರಕ್ಷಣೆ ಮಾಡಿದ್ದಾರೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿತ್ತು. ಮಳೆಯಿಂದಾಗಿ ಬೆಂಗಳೂರಿನ ಕೆ ಆರ್ ಸರ್ಕಲ್ ಅಂಡರ್ ಪಾಸ್ ಜಲಾವೃತಗೊಂಡಿತ್ತು. ಮುಳುಗಿದ ಕಾರಿನಲ್ಲಿ ಹರಸಾಹಸ ಪಟ್ಟು ಆರು ಮಂದಿಯನ್ನು ರಕ್ಷಿಸಲಾಗಿದ್ದು, ನಂತರ ಕಾರನ್ನು ಕೂಡ ಮೇಲಕ್ಕೆತ್ತಲಾಗಿದೆ.ಘಟನೆ ನಡೆದು ಸುಮಾರು ಹೊತ್ತಾದರೂ ಯಾವ ಅಧಿಕಾರಿಗಳಾಗಲಿ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರಲಿಲ್ಲ, ಕೊನೆಗೆ ಸ್ಥಳೀಯರು ಹಗ್ಗದ ಮೂಲಕ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.ಇನ್ನೂ, ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡ ಮಹಿಳೆಗೆ ಚಿಕಿತ್ಸೆ ನೀಡಲು ಸೇಂಟ್ ಮಾರ್ಥಾಸ್ ಆಸ್ಪತ್ರೆ ಸಿಬ್ಬಂದಿ ನಿರಾಕರಣೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಆವರಣದಲ್ಲೇ ಕುಟುಂಬಸ್ಥರು ಗೋಳಾಡುತ್ತಿದ್ದು, ಘಟನೆ ಮನಕಲುಕುತ್ತಿದೆ. ಅಸ್ವಸ್ಥ ಮಹಿಳೆಗೆ ಚಿಕಿತ್ಸೆ ನೀಡಲು ಸಿಬ್ಬಂದಿಗಳು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
