ಉದಯವಾಹಿನಿ, ಬೆಂಗಳೂರು: ದಕ್ಷಿಣ ಕನ್ನಡ, ಉತ್ತರಕನ್ನಡ, ಮಲೆನಾಡು, ಉತ್ತರಕರ್ನಾಟಕ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಜನರ ಬದುಕು ದುಸ್ತರವಾಗಿದೆ. ಸೇತುವೆಗಳು ಮುಳುಗಿ, ಸಂಪರ್ಕ ಕಡಿತಗೊಂಡಿದೆ. ನೂರಾರು ಗ್ರಾಮಗಳು ನೀರಿನಿಂದ ಆವೃತವಾಗಿವೆ. ಸಾವಿರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಕೃಷ್ಣ, ಮಲಪ್ರಭಾ, ಘಟಪ್ರಭಾ, ವೇದಗಂಗ, ದೂದ್‌ಗಂಗ ನದಿಗಳ ಭೋರ್ಗರೆತಕ್ಕೆ ನೂರಾರು ಗ್ರಾಮಗಳು ಮುಳುಗಡೆಯಾಗಿ ಜನಜೀವನ ಚಿಂತಾಜನಕವಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಕೃಷ್ಣಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ.
ಕೃಷ್ಣೆಯ ಅಬ್ಬರಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ ಘಟಪ್ರಭಾ ಅಬ್ಬರಕ್ಕೆ ಬೆಳಗಾವಿ, ಗೋಕಾಕ್‌, ಹಲವು ಗ್ರಾಮಗಳು ಮುಳುಗಿ ಹೋಗಿದ್ದು, ಸಾವಿರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.ಹಿಡ್ಕಲ್‌ ಡ್ಯಾಮ್‌ ಮತ್ತು ನವಿಲುತೀರ್ಥ ಡ್ಯಾಮ್‌ಗಳಿಂದ ನೀರು ಬಿಡುಗಡೆ ಮಾಡಿರುವುದರಿಂದ ನದಿಪಾತ್ರದ ಗ್ರಾಮಗಳು ಮತ್ತು ಹೊಲಗದ್ದೆಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೃಷ್ಣನದಿ ಪ್ರವಾಹ, ಚಿಕ್ಕೋಡಿ, ಅಥಣಿ, ರಾಯಭಾಗ ತಾಲ್ಲೂಕುಗಳನ್ನು ಪೇಚಿಗೆ ಸಿಲುಕಿಸಿದೆ. ಮುಸುಗುಪ್ಪಿ ಮತ್ತು ಅಡಿಭಟ್ಟಿ ಗ್ರಾಮಗಳು ಸಂಪೂರ್ಣ ನೀರಿನಿಂದ ಆವೃತವಾಗಿ ನೂರಾರು ಮನೆಗಳು, ಸಾವಿರಾರು ಎಕರೆ ಜಮೀನು ನೀರಿನಿಂದ ಮುಳುಗಡೆಯಾಗಿದೆ. ಗೋಕಾಕ್‌ನಗರ ಕೊನ್ನೂರು ಪಟ್ಟಣ ಮಳೆ ನೀರಿನಿಂದ ತುಂಬಿಹೋಗಿದ್ದು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮಲಪ್ರಭಾ ನದಿ ಹಾಗೂ ನವಿಲುತೀರ್ಥ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರನ್ನು ಹರಿಯಬಿಟ್ಟಿದ್ದರಿಂದ ರಾಮದುರ್ಗ ನಗರದ ಬಳಿ ತೇರ್‌ಬಜಾರ್‌ ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡು ಹಲವು ಕುಟುಂಬಗಳ ಸ್ಥಳಾಂತರಕ್ಕೂ ಸಮಸ್ಯೆಯಾಗಿದೆ.

Leave a Reply

Your email address will not be published. Required fields are marked *

error: Content is protected !!