ಉದಯವಾಹಿನಿ, ನುಗ್ಗೆ ಸೊಪ್ಪಿನ ಉಪ್ಸಾರು ವಿಶೇಷವಾಗಿ ಗ್ರಾಮೀಣ ಪ್ರದೇಶದ ಒಂದು ಅತ್ಯಂತ ಆರೋಗ್ಯಕರ ಮತ್ತು ಸರಳವಾದ ಖಾದ್ಯವಾಗಿದೆ. ಇದನ್ನು ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಭಾಗಗಳಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಇದು ಕೇವಲ ರುಚಿಕರವಾದ ಊಟ ಅಷ್ಟೇ ಅಲ್ಲದೇ ಮಕ್ಕಳಿಗೆ ಕೆಮ್ಮು, ನೆಗಡಿ, ಗಂಟಲಲ್ಲಿ ಕಿರಿಕಿರಿ ಇದ್ದರೆ ಇದು ಮನೆಮದ್ದು ಕೂಡ ಆಗಿರುತ್ತೆ. ಬಿಸಿ ಬಿಸಿ ಉಪ್ಸಾರು ಕುಡಿದರೆ ಎಲ್ಲವೂ ಮಾಯವಾಗುತ್ತೆ.
ಮಂಡ್ಯ, ರಾಮನಗರ ಅಂತೆಲ್ಲಾ ಗ್ರಾಮೀಣ ಭಾಗಗಳಲ್ಲಿ ನಾನ್ವೆಜ್ ಅಂದರೆ ಮುದ್ದೆ ನಾಟಿಕೋಳಿ ಸಾರಿ ಫೇಮಸ್. ಅದೇ ರೀತಿ ವೆಜ್ ಅಂತ ಬಂದರೆ ಮುದ್ದೆ ಉಪ್ಸಾರು ಫೇಮಸ್. ರಾತ್ರಿ ಹೊತ್ತು ಮುದ್ದೆ ಉಪ್ಸಾರು ತಿಂದು ನಿದ್ದೆ ಮಾಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಅಂತ ನಾಣ್ಣುಡಿ ಇದೆ.
ಗ್ರಾಮೀಣ ಭಾಗದ ಸ್ಪೆಷಲ್ ನುಗ್ಗೆಸೊಪ್ಪು ಉಪ್ಸಾರು!
ಗ್ರಾಮೀಣ ಭಾಗಗಳಲ್ಲಿ ಉಪ್ಸಾರನ್ನು ಭಿನ್ನ ವಿಭಿನ್ನವಾಗಿ ಮಾಡುತ್ತಾರೆ. ಅಲ್ಲದೇ ಈ ಉಪ್ಸಾರನ್ನು ಬೇರೆ ಬೇರೆ ಸೊಪ್ಪುಗಳಿಂದಲೂ ಮಾಡಬಹುದು. ಆದರೂ ನಾವು ಇವತ್ತು ಈ ದೊಡ್ಡಿ ಊಟ ಅಂದರೆ ಉಪ್ಸಾರನ್ನು ಸುಲಭವಾಗಿ ಎಲ್ಲಾ ಕಾಲದಲ್ಲೂ ಸಿಗುವ ನುಗ್ಗೆಸೊಪ್ಪಿನಿಂದ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ ನೋಡಿ. ನೀವೂ ಕೂಡ ಚಳಿಗಾಲದಲ್ಲಿ ಅಥವಾ ಶೀತ, ಕೆಮ್ಮು ಆದಾಗ ಹೀಗೆ ಸರಳವಾಗಿ ನುಗ್ಗೆಸುಪ್ಪು ಉಪ್ಸಾರು ಮಾಡಿ ತಿನ್ನಿ. ಕ್ಷಣದಲ್ಲಿ ನಿಮ್ಮ ಶೀತ ಕಡಿಮೆಯಾಗುತ್ತೆ.
ನುಗ್ಗೆಸೊಪ್ಪು, ತೊಗರಿಬೇಳೆ, ಹೆಸರು ಕಾಳು, ಹಸಿರು ಮೆಣಸಿನ ಕಾಯಿ
ಈರುಳ್ಳಿ, ತೆಂಗಿನ ಕಾಯಿ, ಸಾಸಿವೆ, ಎಣ್ಣೆ, ಜೀರಿಗೆ, ಮೆಣಸು
ಹುಣಸೆ ಹಣ್ಣು, ಟೊಮ್ಯಾಟೊ, ನಿಂಬೆ ಹಣ್ಣಿನ ತುಂಡು, ಕೊತ್ತಂಬರಿ ಸೊಪ್ಪು, ಉಪ್ಪು
ನುಗ್ಗೆಸೊಪ್ಪು ಉಪ್ಸಾರು ಮಾಡುವ ವಿಧಾನ!: ಮೊದಲಿಗೆ ಒಲೆ ಮೇಲೆ ಕುಕ್ಕರ್ ಇಟ್ಟು ಸ್ವಲ್ಪ ನೀರು, ಬೇಳೆ, ಹೆಸರು ಕಾಳು ಹಾಕಿ ಕುದಿ ಬರೋವರೆಗೂ ಬಿಡಬೇಕು. ಕುದಿಯುವ ವೇಳೆ 2 ಟೊಮ್ಯಾಟೊ ಹಾಗೂ ನುಗ್ಗೆಸೊಪ್ಪನ್ನು ಹಾಕಿ ಕುಕ್ಕರ್‌ನಲ್ಲಿ 2 ವಿಶಲ್ ಕೂಗಿಸಬೇಕು. ಆಗಲೇ ಉಪ್ಪನ್ನೂ ಸೇರಿಸಬೇಕು. ಅದು ಆರುವ ಹೊತ್ತಿಗೆ ಉಪ್ಸಾರಿಗೆ ಬೇಕಾಗುವ ಖಾರ ಮಾಡಿಕೊಳ್ಳಬೇಕು.
