ಉದಯವಾಹಿನಿ, ಬೆಂಗಳೂರು: ಮುಡಾ, ವಾಲ್ಮೀಕಿ ಸೇರಿದಂತೆ ವಿವಿಧ ಪ್ರಕರಣವನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್‌‍ ಪಕ್ಷಗಳು ನಡೆಸುವ ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಪಾದಯಾತ್ರೆ ಮಾಡಿಕೊಳ್ಳಲಿ. ಆದರೆ ಅಧಿಕೃತವಾಗಿ ನಾವು ಅನುಮತಿ ನೀಡುವುದಿಲ್ಲ. ಈ ಹಿಂದೆ ನಾವು ಪಾದಯಾತ್ರೆ ಮಾಡುವಾಗಲೂ ಅವರು ಅನುಮತಿ ನೀಡಿರಲಿಲ್ಲ. ಅವರ ಪಾದಯಾತ್ರೆಗೆ ತಡೆ ಮಾಡುವುದಿಲ್ಲ. ಅಗತ್ಯವಾದ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಜೆಡಿಎಸ್‌‍-ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್‌‍ನಿಂದ ಹೋರಾಟ ನಡೆಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ರಣನೀತಿ ರೂಪಿಸುತ್ತಾರೆ. ರಾಜಕೀಯವಾಗಿ ನಾವೂ ಕೂಡ ಉತ್ತರ ನೀಡಲೇಬೇಕಿದೆ. ವಿಪಕ್ಷಗಳು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ನಾವು ರಾಜಕೀಯವಾಗಿಯೇ ಮಾತನಾಡುತ್ತೇವೆ ಎಂದರು.
ಮುಡಾ ನಿವೇಶನ ಹಂಚಿಕೆ ಕಾನೂನು ಪ್ರಕಾರವಾಗಿಯೇ ನಡೆದಿದೆ. ಸೈಟುಗಳ ಹಂಚಿಕೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದಲೇ ತನಿಖೆಗೆ ನ್ಯಾಯಾಂಗ ಆಯೋಗ ರಚಿಸಲಾಗಿದೆ. ವರದಿಯ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯವರು ಅಲ್ಲಿಯವರೆಗೂ ಸಮಾಧಾನದಿಂದ ಇರಲಾಗದೇ ರಾಜಕೀಯ ಮಾಡುತ್ತಿದ್ದಾರೆ ಎಂದು ಪರಮೇಶ್ವರ್‌ ವಾಗ್ದಾಳಿ ನಡೆಸಿದರು.
ಖಾಸಗಿ ಕಂಪನಿಗಳು ರಾಜ್ಯದಿಂದ ಹೊರಹೋಗುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಖಾಸಗಿ ಕಂಪನಿಗಳು ಅವರದ್ದೇ ಆದ ಕೆಲವು ಆಯ್ಕೆಗಳನ್ನಿಟ್ಟುಕೊಂಡು ಬಂದಿರುತ್ತಾರೆ. ಇಲ್ಲಿಗೆ ಬಂದು ನಂತರ ಅವರಿಗೆ ಬೇಕಾದ ಕಡೆ ಹೋಗುತ್ತಾರೆ ಎಂದು ಸ್ಪಷ್ಟನೆ ನೀಡಿದರು. ಬಿಬಿಎಂಪಿ ಕಸದ ಲಾರಿ ಅಪಘಾತವಾಗಿ ನಿನ್ನೆ ರಾತ್ರಿ ಇಬ್ಬರು ಮೃತಪಟ್ಟಿದ್ದಾರೆ. ಇದು ದುರದೃಷ್ಟಕರ ಘಟನೆ. ಬಿಬಿಎಂಪಿಯ ವತಿಯಿಂದ ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!