ಉದಯವಾಹಿನಿ, ಕೆ.ಆರ್.ಪೇಟೆ. : ಪಟ್ಟಣದ ಕಡುಬಡವರಿಗೆ ನಿವೇಶನ ಹಂಚುವ ಸದುದ್ದೇಶದಿಂದ ಭೂ ಸ್ವಾಧೀನ ಮಾಡಿಕೊಳ್ಳಲಾದ ಟಿ.ಬಿ ಬಡಾವಣೆಯಲ್ಲಿ ಇದುವರೆಗೂ ಒಂದೇ ಒಂದು ನಿವೇಶನಗಳನ್ನೂ ಪುರಸಭೆ ಕಡುಬಡವರಿಗೆ ಹಂಚಿಕೆ ಮಾಡದೆ ಸ್ವಾಧೀನವಾದ ಜಮೀನು ಅನ್ಯಾಕ್ರಮಣಗೊಳ್ಳುತ್ತಿದೆ.
ಪಟ್ಟಣದ ಪುರಸಭೆ ಟಿ.ಬಿ ಬಡಾವಣೆಗೆ ಸಂಬಂಧಿಸಿದಂತೆ ಸರ್ವೆ ನಂ ೨೮೦, ೨೮೧, ೨೮೫, ೨೮೬ ಹಾಗೂ ೨೯೦ ರಲ್ಲಿ ಒಟ್ಟು ೨೧ ಎಕರೆ ೧೯ ಗುಂಟೆ ಕೃಷಿ ಭೂಮಿಯನ್ನು ಕಡು ಬಡವರಿಗೆ ನಿವೇಶನ ಹಂಚುವ ಉದ್ದೇಶದಿಂದ ನಂ.ಯೂಐ.೪/೧೯೭೬-೭೭ ರಂತೆ ಕಳೆದ ೪೮ ವರ್ಷಗಳ ಹಿಂದೆ ಭೂ ಸ್ವಾಧೀನ ಮಾಡಿಕೊಂಡಿತ್ತು. ಭೂ ಸ್ವಾಧೀನವಾಗಿ ಹತ್ತಿರ ಹತ್ತಿರ ಐದು ದಶಕಗಳು ಸಮೀಪಿಸುತ್ತಿದ್ದರೂ ಪುರಸಭೆ ಇದುವರೆಗೂ ಕಡು ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ.
೭೦ರ ದಶಕದಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ದಿವಂಗತ ಕೆ.ಜೆ.ಬೋರಲಿಂಗೇಗೌಡ ಅವರು ಪಟ್ಟಣದ ಕಡು ಬಡವರಿಗೆ ನಿವೇಶನ ಹಂಚುವ ಕಾರಣಕ್ಕೆ ಟಿ.ಬಿ.ಬಡಾವಣೆಯ ಜಾಗವನ್ನು ನಿಯಮಾನುಸಾರ ಭೂ ಸ್ವಾಧೀನ ಮಾಡಿದ್ದರು. ಅನಂತರ ಬಂದ ಅನೇಕ ಪುರಸಭೆಯ ಅಧ್ಯಕ್ಷರುಗಳು ನಿಯಮ ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದ ಪರಿಣಾಮ ಪಟ್ಟಣದ ಹೇಮಾವತಿ ಬಡಾವಣೆ ಹಾಗೂ ಟಿ.ಬಿ.ಬಡಾವಣೆಯ ಅಕ್ರಮದ ತನಿಖೆಗೆ ಒತ್ತಾಯಿಸಿ ಪುರಸಭೆಯ ಸದಸ್ಯ ಹಾಗೂ ಪ್ರಸಕ್ತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಅವರು ೨೦೦೨-೦೩ ನೇ ಸಾಲಿನಲ್ಲಿ ಅಂದಿನ ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯ ಅವರಿಗೆ ದೂರು ನೀಡಿದ್ದರು. ಹೇಮಾವತಿ ಬಡಾವಣೆಯ ನಿವೇಶನ ಹಂಚಿಕೆಯ ಸಂಬಂಧ ಲೋಕಾಯುಕ್ತ ತನಿಖಾ ವರದಿ ಬಂದಿದ್ದು ಟಿ.ಬಿ.ಬಡಾವಣೆಯ ಬಗೆಗಿನ ತನಿಖಾ ವರದಿ ಬಾಕಿ ಇದೆ.
ಲೋಕಾಯುಕ್ತರ ತನಿಖಾ ವರದಿ ಬಾಕಿಯಿರುವಾಗಲೇ ಕಡು ಬಡವರ ನಿವೇಶನಕ್ಕೆ ಮೀಸಲಾದ ಟಿ.ಬಿ.ಬಡಾವಣೆ ಮಾತ್ರ ಪಟ್ಟಣದ ಕಡು ಬಡುವರ ಕಣ್ಣ ಮುಂದೆಯೇ ಅನ್ಯಾಕ್ರಮಣಕ್ಕೆ ಒಳಗಾಗಿ ಕರಗುತ್ತಿದೆ. ಟಿ.ಬಿ.ಬಡಾವಣೆಯಲ್ಲಿ ಟೌನ್ ಪ್ಲಾನಿಂಗ್ ಮಾಡಿ ನಿವೇಶನಗಳನ್ನು ನಿರ್ಮಿಸಬೇಕಾದ ಪುರಸಭೆ ತನ್ನ ಮೂಲ ಉದ್ದೇಶವನ್ನೆ ಮರೆತಿದೆ. ಟಿ.ಬಿ.ಬಡಾವಣೆಯಲ್ಲಿ ಬಡವರ ಮನೆಗಳು ತಲೆ ಎತ್ತುವ ಬದಲು ಖಾಸಗಿ ಶಾಲೆ, ಪುರಸಭೆ ಸೇರಿದ ಖಾಸಿಂಖಾನ್ ಸಮುದಾಯ ಭವನ ( ಈಗ ಪುರಸಭೆಯ ಆಡಳಿತ ಕಛೇರಿಯಾಗಿದೆ ), ಶಹರಿ ರೋಜ್ ಗಾರ್ ಭವನ, ಡಾ.ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಭವನಗಳು ತಲೆ ಎತ್ತಿವೆ.
